×
Ad

ಬೆಂಗಳೂರು: ಕೃಷಿ ಮೇಳಕ್ಕೆ ತೆರೆ; ನಾಲ್ಕು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಭೇಟಿ, 4.25 ಕೋಟಿ ರೂ.ವಹಿವಾಟು

Update: 2021-11-14 20:35 IST

ಬೆಂಗಳೂರು, ನ. 14: ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿರುವ ಕೃಷಿ ಮೇಳ-2021ಕ್ಕೆ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೇ ರೈತರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದ್ದು, ನ.11ರಿಂದ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳಕ್ಕೆ ತೆರೆಬಿದ್ದಿದೆ.

ನಾಲ್ಕು ದಿನಗಳ ಈ ಕೃಷಿ ಮೇಳಕ್ಕೆ ಒಟ್ಟಾರೆ 8 ಲಕ್ಷಕ್ಕೂ ಅಧಿಕ ಮಂದಿ ಖುದ್ದು ಭೇಟಿ ನೀಡಿದ್ದು, ವರ್ಚುಯಲ್ ಮೂಲಕ ಒಟ್ಟು 38ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಒಟ್ಟಾರೆ ನಾಲ್ಕು ದಿನಗಳಲ್ಲಿ 4.25 ಕೋಟಿ ರೂ.ಗಳಷ್ಟು ವಹಿವಾಟನ್ನು ಕೃಷಿ ಮೇಳ ಮಾಡಿದೆ ಎಂದು ಕೃಷಿ ವಿಶ್ವ ವಿದ್ಯಾಲಯ ಮಾಹಿತಿ ನೀಡಿದೆ.

ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ಯಾವುದೇ ಜನಪ್ರತಿನಿಧಿಗಳ ಕೃಷಿ ಮೇಳದಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿವಿಯ ಮುಖ್ಯಸ್ಥರು ಮಾತ್ರವೇ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದೇ ವೇಳೆ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ ವಿವಿಧ ಜಿಲ್ಲೆಗಳ ರೈತರನ್ನು ಸನ್ಮಾನಿಸಲಾಯಿತು.

ಕೃಷಿ ಮೇಳದ ಅಂಗವಾಗಿ ವಿವಿ ಆವರಣದಲ್ಲಿ 550 ಕೃಷಿ ವಸ್ತುಗಳ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಿದ್ದು, ಕೃಷಿ ಉಪಕರಣಗಳ ಖರೀದಿ ಭರಾಟೆ ಜೋರಾಗಿತ್ತು. ಜೊತೆಗೆ ಕೃಷಿ ಪ್ರಾತ್ಯಕ್ಷತೆಗಳನ್ನು ರೈತರು ಹಾಗೂ ಸಾರ್ವಜನಿಕರು ವೀಕ್ಷಿಸಿದರು. ಕೃಷಿ ಮೇಳಕ್ಕೆ ಮೊದಲನೆ ದಿನ-66 ಸಾವಿರ, ಎರಡನೇ ದಿನ-1.70 ಲಕ್ಷ, ಮೂರನೇ ದಿನ-3ಲಕ್ಷ ಮತ್ತು ನಾಲ್ಕನೇ ದಿನ- 2.64 ಲಕ್ಷ ಸೇರಿದಂತೆ ಒಟ್ಟು 8ಲಕ್ಷ ಜನರು ಮೇಳವನ್ನು ವೀಕ್ಷಿಸಿದ್ದಾರೆ.

ಕೃಷಿ ಮೇಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಮಳಿಗೆಗಳು ಸೇರಿದಂತೆ ವಿವಿ ಆವರಣದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಕೆಲ ಮಳಿಗೆಗಳಲ್ಲಿ ಜನರು ಮುಗಿಬಿದ್ದು ಖರೀದಿ ಮಾಡಿದ್ದು ನಡೆಯಿತು.

`ನಮ್ಮ ದೇಶ ಕೃಷಿ ಆಧಾರಿತ ರಾಷ್ಟ್ರವಾಗಿದೆ. ಕೃಷಿ ಸಂಬಂಧಿತ ಜ್ಞಾನಭಿವೃದ್ಧಿಗಾಗಿ ಕೃಷಿ ಮೇಳ ಸಹಕಾರಿಯಾಗಲಿದ್ದು, ಮೇಳ ಆಯೋಜನೆಯಿಂದಾಗಿ ಸಾವಿರಾರು ರೈತರು ಮತ್ತು ನಾಗರಿಕರು ಅನೇಕ ಮಹತ್ವಪೂರ್ಣ ಮಾಹಿತಿಯೊಂದಿಗೆ, ಅನುಕೂಲ ಪಡೆಯಲಿದ್ದಾರೆ.

 ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News