ಪಾಸ್‌ ಪೋರ್ಟ್ ಸಿಗದೆ ಹವಾಮಾನ ಶೃಂಗಸಭೆಗೆ ಹಾಜರಾಗಿಲ್ಲ: ಪರಿಸರ ಕಾರ್ಯಕರ್ತೆ ದಿಶಾ ರವಿ

Update: 2021-11-14 15:12 GMT

ಬೆಂಗಳೂರು, ನ.14: ತನ್ನ ಪಾಸ್‌ ಪೋರ್ಟ್ ಗಾಗಿ 88 ದಿನಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಸರಕಾರವು ಅದನ್ನು ಮರಳಿಸಿಲ್ಲ,ಹೀಗಾಗಿ ಸ್ಕಾಟ್ಲಂಡ್ ನ ಗ್ಲಾಸ್ಗೋದಲ್ಲಿ ವಿಶ್ವಸಂಸ್ಥೆಯ ಸಿಒಪಿ26 ಶೃಂಗಸಭೆಯಲ್ಲಿ ಭಾಗವಹಿಸಲು ತನಗೆ ಸಾಧ್ಯವಾಗಿಲ್ಲ ಎಂದು ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ತಿಳಿಸಿದ್ದಾರೆ.

ರೈತರ ಪ್ರತಿಭಟನೆಗೆ ಸಂಬಂಧಿಸಿದ ‘ಟೂಲ್‌ಕಿಟ್’ ಪ್ರಕರಣದಲ್ಲಿ ತನ್ನ ಜಾಮೀನು ಷರತ್ತುಗಳಲ್ಲೊಂದು ತನಗೆ ದೇಶದಿಂದ ಹೊರಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಆನ್ಲೈನ್ ವೃತ್ತಪತ್ರಿಕೆ ದಿ ಇಂಡಿಪೆಂಡೆಂಟ್‌ನಲ್ಲಿಯ ಅಭಿಪ್ರಾಯ ಲೇಖನದಲ್ಲಿ ದಿಶಾ ಬರೆದಿದ್ದಾರೆ.

ದಿಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ದಿಶಾ ರವಿಯವರನ್ನು ಬಂಧಿಸಲಾಗಿದ್ದು,ಹತ್ತು ದಿನಗಳ ಬಳಿಕ ಫೆ.23ರಂದು ಅವರನ್ನು ತಿಹಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ಕೇಂದ್ರದ ಮೂರು ಕೃಷಿಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ನೆರವಾಗುವ ಉದ್ದೇಶದಿಂದ ರೂಪಿಸಲಾಗಿದ್ದ ಆನ್ಲೈನ್ ದಾಖಲೆ ‘ಟೂಲ್‌ಕಿಟ್ ’ಅನ್ನು ಸಂಪಾದಿಸಿದ್ದ ಆರೋಪವನ್ನು ದಿಶಾ ವಿರುದ್ಧ ಹೊರಿಸಲಾಗಿತ್ತು. ಟೂಲ್ಕಿಟ್ ಅನ್ನು ಸ್ವೀಡನ್ನಿನ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರು ಟ್ವೀಟಿಸಿದ್ದರು.

‘ಭಾರತದಲ್ಲಿ ಜಾಮೀನು ಬಿಡುಗಡೆ ಎಂದರೆ ವ್ಯಕ್ತಿ ಕೇವಲ ಭಾಗಶಃ ಸ್ವತಂತ್ರ ಎಂದು ಅರ್ಥ. ನಿಮ್ಮ ಎಫ್ಐಆರ್ ನಂಬರ್ ಜೀವನದ ಎಲ್ಲ ಮಗ್ಗಲುಗಳಲ್ಲಿಯೂ ನಿಮ್ಮಿಂದಿಗೇ ಇರುತ್ತದೆ ಮತ್ತು ಅದು ನಾನು ಗ್ಲಾಸ್ಗೋ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದನ್ನು ತಡೆದಿದೆ’ ಎಂದು ಹೇಳಿರುವ ದಿಶಾ, ವಿದೇಶಾಂಗ ಸಚಿವಾಲಯದ ಆದೇಶದ ಆಧಾರದಲ್ಲಿ ತಾನು ತನ್ನ ಪಾಸ್‌ ಪೋರ್ಟ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದೆ. ಎರಡು ಕೋರ್ಟ್ ವಿಚಾರಣೆಗಳು, 60 ದಿನಗಳು, ಎರಡು ಪೊಲೀಸ್ ಭೇಟಿಗಳು ಮತ್ತು ಪಾಸ್‌ ಪೋರ್ಟ್ ಕಚೇರಿಗೆ ಎರಡು ಭೇಟಿಗಳು ಇಷ್ಟಾದರೂ ಪಾಸ್ಪೋರ್ಟ್ ತನ್ನ ಕೈಸೇರಿಲ್ಲ ಎಂದಿದ್ದಾರೆ.
 
ಭಾರತದಲ್ಲಿ ಪ್ರಜೆಗಳು ಬಂಧಿಸಲ್ಪಟ್ಟರೆ ಅವರಿಗೆ ನಾಗರಿಕ ಸ್ವಾತಂತ್ರಗಳನ್ನು ನಿರಾಕರಿಸಲಾಗುತ್ತದೆ ಎಂದು ಹೇಳಿರುವ ದಿಶಾ,ಬೆಂಗಳೂರು ಪೊಲೀಸರು ತನ್ನ ಪಾಸ್‌ ಪೋರ್ಟ್ ತಲುಪಿಸಲು ನಿರಾಕರಿಸಿದ್ದರು,ಬದಲಿಗೆ ‘ಬಂಡುಕೋರ’ಳನ್ನು ಬೆಳೆಸಿದ್ದಕ್ಕಾಗಿ ತನ್ನ ತಾಯಿಯನ್ನು ಟೀಕಿಸಿದ್ದರು. ಓರ್ವ ಪೊಲೀಸ್ ಅಧಿಕಾರಿಯಂತೂ ತನ್ನನ್ನು ದೇಶಭ್ರಷ್ಟ ವಿಜಯ ಮಲ್ಯಗೆ ಹೋಲಿಸಿದ್ದ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News