ದೇಶದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಅಗತ್ಯ ಬಹಳ ಇದೆ: ರಣದೀಪ್ ಸಿಂಗ್ ಸುರ್ಜೆವಾಲ

Update: 2021-11-14 15:42 GMT

 ಇಂದು ಕಾಂಗ್ರೆಸ್ ಪಕ್ಷದ ಅಗತ್ಯ ಬಹಳ ಇದೆ. ನಮ್ಮ ಕಾನೂನಿನ ಮೇಲೆ ದಾಳಿ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಏನೇ ಕಷ್ಟ ಬಂದರೂ ಅದು ತಟ್ಟುವುದು ಕೆಳವರ್ಗದ ಜನರಿಗೆ. ಹೀಗಾಗಿ ಇದೆಲ್ಲವನ್ನ ತಡೆಯಲು ಕಾಂಗ್ರೆಸ್ ಈ ದೇಶದ ಯುವ ಜನತೆ ಯುವಶಕ್ತಿಯಾಗಿದೆ' ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದರು.

ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಪಂಡಿತ್ ಜವಾಹರ ಲಾಲ್ ನೆಹರು ಅವರ ಜನ್ಮ ದಿನಾಚರಣೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ದಲಿತರು, ಹಿಂದುಳಿದವರ ಮೇಲೆ ದಾಳಿಯಾಗುತ್ತಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು, ಎಲ್ಲರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ವರ್ಗದವರಿಗೆ ನ್ಯಾಯ ಸಿಗುವಂತೆ ಮಾಡಲು ಕಾಂಗ್ರೆಸ್ ಬೇಕಿದೆ. 8 ಲಕ್ಷ ಕೋಟಿ ಜನರು ಸಾಲ ಪಡೆದು, ಏಳು ವರ್ಷಗಳಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅನೇಕ ಬ್ಯಾಂಕುಗಳು ಮುಚ್ಚಿಹೋಗಿವೆ. ಹಳ್ಳಿಯ ಸಣ್ಣ ವ್ಯಕ್ತಿಗೂ ಇದರಿಂದ ಸಂಕಷ್ಟ ಎದುರಾಗಿದೆ. ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಕಾಂಗ್ರೆಸ್ ಅವಶ್ಯಕತೆ ಇದೆ. ಭಾರತ ದೇಶ ಎಲ್ಲ ವರ್ಗ,  ಜಾತಿಯ, ಎಲ್ಲ ಧರ್ಮದಿಂದ ಕೂಡಿದೆ. 140 ಕೋಟಿ ಪ್ರತಿಯೊಬ್ಬ ಭಾರತೀಯರ ಪರವಾಗಿ ನಿಲ್ಲುವ ಪಕ್ಷ ಕಾಂಗ್ರೆಸ್. ಈ ದೇಶದ ಪುನರ್ ನಿರ್ಮಾಣಕ್ಕೆ ನೀವು ಹೋರಾಟಗಾರರಾಗಬೇಕು' ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಆರ್.ಧ್ರುವ ನಾರಾಯಣ, ಅಲ್ಲಂ ವೀರಭದ್ರಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News