ಝಮೀರ್ ಅಹ್ಮದ್ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ

Update: 2021-11-15 12:30 GMT

ಬೆಂಗಳೂರು, ನ.15: ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಝಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು ಉತ್ತಮವಾಗಿ ಕೆಲಸ ಮಾಡಿದಾರೆ. ಅದರ ಪರಿಣಾಮವಾಗಿಯೆ, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು, ಮುಂದುವರೆದ ವರ್ಗದವರು, ಬಡವರು, ಯುವಕರು, ಮಹಿಳೆಯರು ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡಿದ್ದಾರೆ ಎಂದರು.

ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ನನ್ನ ನಿವಾಸದ ಮೇಲೆ ಈ.ಡಿ.ದಾಳಿ ನಡೆದ ಸಂದರ್ಭದಲ್ಲಿ ನಾನು ಹೊಸದಿಲ್ಲಿಯಲ್ಲಿರುವ ಸುರ್ಜೇವಾಲ ಅವರ ನಿವಾಸಕ್ಕೆ ಭೇಟಿ ನೀಡಿದ್ದೆ. ಆಗ ಅವರು ನಿನ್ನ ಮೇಲೆ ನಡೆದಿರುವ ಈ.ಡಿ.ದಾಳಿಯ ಮಾಹಿತಿ ನಮಗೆ ಸಿಕ್ಕಿದೆ. ನಿನಗೆ ಕಿರುಕುಳ ನೀಡಲು ಇದನ್ನು ಮಾಡಲಾಗಿದೆ. ಚಿಂತೆ ಮಾಡಬೇಡ, ಕಾಂಗ್ರೆಸ್ ಪಕ್ಷ ನಿನ್ನ ಜೊತೆ ಇದೆ ಎಂದು ಅಭಯ ನೀಡಿದ್ದರು.

ಅಲ್ಲದೆ, ಬೆಂಗಳೂರಿಗೆ ಬಂದಾಗ ನಿನ್ನ ಮನೆಗೆ ಬರುತ್ತೇನೆ ಎಂದು ಹೇಳಿದ್ದರು. ಅದರಂತೆ, ವಿಧಾನಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿ ಸಮಾಲೋಚಿಸಲು ಸುರ್ಜೇವಾಲ ಬೆಂಗಳೂರಿಗೆ ಬಂದಿದ್ದರಿಂದ ನಮ್ಮ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದರು.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೇವಲ ನಾನು ಪ್ರಚಾರ ಮಾಡಲಿಲ್ಲ. ನಮ್ಮ ಮುಖಂಡರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಸಚಿವರಾದ ನಸೀರ್ ಅಹ್ಮದ್, ರಹೀಮ್ ಖಾನ್, ಯು.ಟಿ.ಖಾದರ್, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸೇರಿದಂತೆ ಎಲ್ಲ ಮುಖಂಡರು ಪ್ರಚಾರ ಮಾಡಿದ್ದಾರೆ ಎಂದು ಅವರು ಹೇಳಿದರು.

ನಾವು ಪ್ರಚಾರ ಮಾಡುತ್ತಿದ್ದಂತೆ ಯಾರು ಗೆಲ್ಲುವುದಿಲ್ಲ. ಕ್ಷೇತ್ರದಲ್ಲಿ ತಳಮಟ್ಟದಿಂದ ಸಕ್ರಿಯವಾಗಿ ದುಡಿದ ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರ ಪ್ರಾಮಾಣಿಕ ದುಡಿಮೆಯ ಫಲವಾಗಿ ನಾವು ಗೆದ್ದಿದ್ದೇವೆ. ಈ ಗೆಲುವಿನ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲಬೇಕು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಝಮೀರ್ ಅಹ್ಮದ್ ಅವರ ಪುತ್ರ ನಟ ಝೈದ್ ಖಾನ್, ಕಾಂಗ್ರೆಸ್ ಮುಖಂಡರಾದ ಶಕೀಲ್ ನವಾಝ್, ಜಿ.ಎ.ಬಾವಾ, ಬಿ.ಕೆ.ಅಲ್ತಾಫ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News