ಭಾರತದಲ್ಲಿ ಪ್ರತಿ ದಿನ ಐವರು ಪೊಲೀಸ್ ಕಸ್ಟಡಿಯಲ್ಲಿ ಸಾಯುತ್ತಿದ್ದಾರೆ: ವರದಿ

Update: 2021-11-15 13:26 GMT

ಹೊಸದಿಲ್ಲಿ,ನ.15: ಉತ್ತರ ಪ್ರದೇಶದ ಕಾಸಗಂಜ್ ಪೊಲೀಸ್ ಠಾಣೆಯಲ್ಲಿ 22ರ ಹರೆಯದ ಅಲ್ತಾಫ್ನ ಸಾವು ಬಿರುಗಾಳಿಯನ್ನೆಬ್ಬಿಸಿದೆ. ಆತ ತನ್ನ ಜಾಕೆಟ್ ಹುಡ್ನ ದಾರದಿಂದ ವಾಷ್ರೂಮಿನಲ್ಲಿಯ ನೆಲದಿಂದ ಕೇವಲ ಎರಡು ಅಡಿ ಎತ್ತರದಲ್ಲಿರುವ ನೀರಿನ ನಲ್ಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಇದನ್ನು ನಂಬಲಸಾಧ್ಯ ಎಂದಿರುವ ಆತನ ಕುಟುಂಬವು, ಪೊಲೀಸರೇ ಅಲ್ತಾಫ್ನನ್ನು ಕೊಂದಿದ್ದಾರೆ ಎಂದು ಆರೋಪಿಸಿದೆ. ಕಸ್ಟಡಿ ಸಾವುಗಳ ಬಗ್ಗೆ ನಮ್ಮ ಕಾನೂನು ಏನು ಹೇಳುತ್ತದೆ?

 ಸರ್ವೋಚ್ಚ ನ್ಯಾಯಾಲಯವು ಕಸ್ಟಡಿ ಸಾವುಗಳನ್ನು ‘ಕಾನೂನಿನ ಆಳ್ವಿಕೆಯಲ್ಲಿರುವ ನಾಗರಿಕ ಸಮಾಜದಲ್ಲಿಯ ಅತ್ಯಂತ ಕೆಟ್ಟ ಅಪರಾಧಗಳಲ್ಲಿ ಒಂದು ’ಎಂದು ಬಣ್ಣಿಸಿದೆ. ಆದಾಗ್ಯೂ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಸ್ಟಡಿ ಸಾವುಗಳು ಸಂಭವಿಸುತ್ತಿವೆ. ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಅಭಿಯಾನದ ಪ್ರಕಾರ 2019ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಪ್ರತಿ ದಿನ ಐವರು ಸಾವನ್ನಪ್ಪಿದ್ದರು. ಅದರ 2020ರ ವರದಿಯಂತೆ ಎಲ್ಲ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಸ್ಟಡಿ ಸಾವುಗಳು ಸಂಭವಿಸಿದ್ದವು.

ಮಂಗಳವಾರ ಪೊಲೀಸ್ ಕಸ್ಟಡಿಯಲ್ಲಿ ಅಲ್ತಾಫ್ ಸಾವಿನ ಬಳಿಕ ಕಸ್ಟಡಿ ಸಾವುಗಳು ಮತ್ತೊಮ್ಮೆ ಗಮನವನ್ನು ಸೆಳೆದಿವೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕಸ್ಟಡಿ ಸಾವುಗಳ ಹಿನ್ನೆಲೆಯಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗ ಇದನ್ನು ನಿಭಾಯಿಸಲು ಆಗಾಗ್ಗೆ ಕಾರ್ಯವಿಧಾನಗಳನ್ನು ರೂಪಿಸಿವೆ.

ಪೊಲೀಸ್ ಕಸ್ಟಡಿಯಲ್ಲಿ ಸಾವು ಸಂಭವಿಸಿದರೆ ಎಫ್ಐಆರ್ ದಾಖಲಿಸಿಕೊಳ್ಳುವುದನ್ನು ಕಾನೂನು ಕಡ್ಡಾಯಗೊಳಿಸಿದೆ. 2005ರಲ್ಲಿ ಕ್ರಿಮಿನಲ್ ವಿಚಾರಣೆಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ನಿಯಮಗಳನ್ನೊಳಗೊಂಡಿರುವ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1971ನ್ನು ತಿದ್ದುಪಡಿಗೊಳಿಸಿ ಕಲಂ 176ರಡಿ ಕಸ್ಟಡಿ ಸಾವುಗಳ ಬಗ್ಗೆ ಪೊಲೀಸರ ತನಿಖೆಯ ಜೊತೆಗೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಥವಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ರಿಂದ ವಿಚಾರಣೆಯನ್ನು ಕಡ್ಡಾಯಗೊಳಿಸಲಾಗಿತ್ತು. 

ಸಾವಿನ 24 ಗಂಟೆಗಳಲ್ಲಿ ತನಿಖೆಯನ್ನು ನಡೆಸುವ ಮ್ಯಾಜಿಸ್ಟ್ರೇಟರ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸಿವಿಲ್ ಸರ್ಜನ್ ಗೆ ರವಾನಿಸಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ಕಾರಣವನ್ನು ಅವರು ಲಿಖಿತ ರೂಪದಲ್ಲಿ ದಾಖಲಿಸಬೇಕು. ಸಾಧ್ಯವಾದರೆ ಮ್ಯಾಜಿಸ್ಟ್ರೇಟ್ರು ವಿಚಾರಣೆಯ ಬಗ್ಗೆ ಮೃತ ವ್ಯಕ್ತಿಯ ಕುಟುಂಬಕ್ಕೆ ತಿಳಿಸಬೇಕು ಮತ್ತು ಅದನ್ನು ನಡೆಸುವಾಗ ಕುಟುಂಬ ಸದಸ್ಯರು ಹಾಜರಿರಲು ಅವಕಾಶ ನೀಡಬೇಕು.
 
ಇದರ ಜೊತೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ)ವೂ ಕಸ್ಟಡಿ ಸಾವುಗಳ ಪ್ರಕರಣದಲ್ಲಿ ಅನುಸರಿಸಬೇಕಾದ ಪ್ರಕ್ರಿಯೆ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಿದೆ. ಇಂತಹ ಎಲ್ಲ ಸಾವುಗಳನ್ನು 24 ಗಂಟೆಗಳಲ್ಲಿ ಎನ್ಎಚ್ಆರ್ಸಿಗೆ ವರದಿ ಮಾಡಬೇಕಾಗುತ್ತದೆ. ಕಸ್ಟಡಿ ಸಾವುಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿಯು ಮಹತ್ವದ ದಾಖಲೆಯಾಗಿರುವುದರಿಂದ ಸಾವಿನ ಬಗ್ಗೆ ಶಂಕೆಯಿದ್ದಲ್ಲಿ ಮರಣೋತ್ತರ ಪರೀಕ್ಷೆಯ ವೀಡಿಯೊ ಚಿತ್ರೀಕರಣವನ್ನು ಈ ಮಾರ್ಗಸೂಚಿಗಳು ಕಡ್ಡಾಯಗೊಳಿಸಿವೆ.

ಘಟನೆಯ ಎರಡು ತಿಂಗಳುಗಳ ಒಳಗೆ ಮರಣೋತ್ತರ ಪರೀಕ್ಷೆ,ವೀಡಿಯೊ ಚಿತ್ರೀಕರಣ ಮತ್ತು ಮ್ಯಾಜಿಸ್ಟೀರಿಯಲ್ ವಿಚಾರಣೆ ವರದಿ ಸೇರಿದಂತೆ ಎಲ್ಲ ವರದಿಗಳನ್ನು ತನಗೆ ಸಲ್ಲಿಸುವುದನ್ನೂ ಎನ್ಎಚ್ಆರ್ಸಿ ಕಡ್ಡಾಯಗೊಳಿಸಿದೆ.

ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಮೃತರ ಕುಟುಂಬಗಳಿಗೆ ಪರಿಹಾರವನ್ನೂ ಮಂಜೂರು ಮಾಡಿವೆ. ಕಸ್ಟಡಿಯಲ್ಲಿ ಅಸಹಜ ಸಾವು ಮೃತನ ಬದುಕುವ ಹಕ್ಕನ್ನೂ ಉಲ್ಲಂಘಿಸಿದೆ ಎಂಬ ಅಂಶವನ್ನು ಈ ತೀರ್ಪುಗಳು ಆಧರಿಸಿವೆ. ವಿವಿಧ ರಾಜ್ಯ ಸರಕಾರಗಳು ತಮ್ಮದೇ ಆದ ಪರಿಹಾರ ಯೋಜನೆಗಳನ್ನು ರೂಪಿಸಿವೆ.

2012ರಿಂದ 2015ವರೆಗಿನ ಮತ್ತು ಅದರ ನಂತರದ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ಸಿಆರ್ಬಿ)ದ ವರದಿಗಳಂತೆ ಅಸಹಜ ಸಾವನ್ನಪಿರುವ ಎಲ್ಲ ಕೈದಿಗಳನ್ನು ಗುರುತಿಸುವಂತೆ ಮತ್ತು ಪರಿಹಾರವನ್ನು ಒದಗಿಸುವಂತೆ 2017ರಲ್ಲಿ ಸರ್ವೋಚ್ಚ ನ್ಯಾಯಾಲಯವು ಎಲ್ಲ ಉಚ್ಚ ನ್ಯಾಯಾಲಯಗಳಿಗೆ ನಿರ್ದೇಶ ನೀಡಿತ್ತು.
ಕಾನೂನು ಕಾಗದದಲ್ಲಿದೆ,ಅದನ್ನು ಹೆಚ್ಚಿನ ಸಂದರ್ಭಗಳಲ್ಲಿ ಪಾಲಿಸಲಾಗುವುದಿಲ್ಲ.
  
ಕಸ್ಟಡಿ ಸಾವುಗಳಲ್ಲಿ ಎನ್ಎಚ್ಆರ್ಸಿಯ ಪಾತ್ರವು ಮುಖ್ಯವಾಗಿದೆ ಎಂದು 2017ರಲ್ಲಿ ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು. ಆದಾಗ್ಯೂ ಎನ್ಎಚ್ಆರ್ಸಿ ಆಗಾಗ್ಗೆ ಕಳುಹಿಸುವ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ ಮತ್ತು ಅವುಗಳನ್ನು ಪಾಲಿಸುವುದಕ್ಕಿಂತ ಉಲ್ಲಂಘಿಸುವುದೇ ಹೆಚ್ಚು.

ಕಸ್ಟಡಿ ಸಾವುಗಳಲ್ಲಿ ನ್ಯಾಯಾಂಗ ವಿಚಾರಣೆಗಳನ್ನು ಕಡ್ಡಾಯಗೊಳಿಸುವಂತೆ ಕೋರಿ 2020ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. 2005 ಮತ್ತು 2017ರ ನಡುವೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಅಥವಾ ಕಸ್ಟಡಿಯಿಂದ ನಾಪತ್ತೆಯಾದ 827 ಪ್ರಕರಣಗಳ ಪೈಕಿ ಕೇವಲ ಶೇ.20ರಷ್ಟು ಪ್ರಕರಣಗಳಲ್ಲಿ ನ್ಯಾಯಾಂಗ ವಿಚಾರಣೆಗಳಿಗೆ ಆದೇಶಿಸಲಾಗಿತ್ತು ಎಂಬ ಎನ್ಸಿಆರ್ಬಿ ವರದಿಯಲ್ಲಿನ ಅಂಶವನ್ನು ಅರ್ಜಿಯು ಬೆಟ್ಟು ಮಾಡಿತ್ತು.

ಎಲ್ಲ ಪೊಲೀಸ್ ಠಾಣೆಗಳಲ್ಲಿ ಮತ್ತು ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯನ್ನೂ ಸರ್ವೋಚ್ಚ ನ್ಯಾಯಾಲಯವು ಕಡ್ಡಾಯಗೊಳಿಸಿದೆ. ಆದರೆ ಇದನ್ನು ಪಾಲಿಸಲಾಗುತ್ತಿಲ್ಲ ಎನ್ನುವುದನ್ನು ಆರ್ಟಿಐ ಅಡಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಉತ್ತರಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಅವಲೋಕನಗಳು ಬಹಿರಂಗಗೊಳಿಸಿವೆ.

ಕೃಪೆ: Scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News