ಬೆಂಗಳೂರು: ಇಪ್ಪತ್ತು ತಿಂಗಳ ಬಳಿಕ ನಗರದಲ್ಲಿ ರಾತ್ರಿ ವೇಳೆ ಬಿಎಂಟಿಸಿ ಬಸ್ ಸಂಚಾರ ಪುನಾರಂಭ
ಬೆಂಗಳೂರು, ನ,15: ಸೋಮವಾರದಿಂದ ರಾತ್ರಿ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಿದೆ. ಕಳೆದ 20 ತಿಂಗಳಿನಿಂದ ಕೊವಿಡ್ 19 ಕಾರಣದಿಂದಾಗಿ ಬಿಎಂಟಿಸಿ ರಾತ್ರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಈಗ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ವಿವಿಧ ಪ್ರದೇಶಗಳಿಗೆ 48 ಮಾರ್ಗಗಳಲ್ಲಿ ಸುಮಾರು 70 ಬಿಎಂಟಿಸಿ ಬಸ್‍ಗಳು ನಗರದಲ್ಲಿ ಸಂಚಾರ ಆರಂಭಿಸಿವೆ.
ನಗರದಲ್ಲಿ ಕೊರೋನ ಸೋಂಕು ಪ್ರಕರಣಗಳು ಕಡಿಮೆಯಾದ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಕರ್ನಾಟಕ ಸರಕಾರ ವಿಧಿಸಿದ್ದ ರಾತ್ರಿ ಕರ್ಫ್ಯೂ ಆದೇಶ ಹಿಂತೆಗೆದುಕೊಂಡಿತ್ತು. ಆದುದರಿಂದ ನಗರದ ಮತ್ತು ನಗರದ ಹೊರವಲಯದಲ್ಲಿ ಬಸ್‍ಗಳಲ್ಲಿ ಪ್ರಯಾಣಿಸುವವರ ಹಿತದೃಷ್ಟಿಯಿಂದ ರಾತ್ರಿ ಸಂಚಾರವನ್ನು ಬಿಎಂಟಿಸಿ ಆರಂಭಿಸಿದೆ.
ಸದ್ಯ ಸುಮಾರು 120 ಎಸಿ ಬಸ್‍ಗಳು ಸೇರಿ, 5,200 ಬಸ್‍ಗಳು ದಿನ ಒಂದಕ್ಕೆ ಬೆಂಗಳೂರಿನಲ್ಲಿ ರವಿವಾರ ಸುಮಾರು ಆರು ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಪುನಾರಂಭಿಸಲಾಗಿದೆ. ಕೊರೋನ ಸೋಂಕು ಹರಡುವ ಮುನ್ನ ಬಿಎಂಟಿಸಿ ಸುಮಾರು 130 ಬಸ್‍ಗಳನ್ನು ಬೆಂಗಳೂರು ನಗರದಲ್ಲಿ ರಾತ್ರಿ ಓಡಿಸುತ್ತಿತ್ತು. ಈಗ ಬೇಡಿಕೆ, ಪ್ರಯಾಣಿಕರ ಸಂಖ್ಯೆ ಗಮನಿಸಿಕೊಂಡು ನಿಧಾನವಾಗಿ ರಾತ್ರಿ ಸಂಚರಿಸುವ ಬಸ್‍ಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.