ಸಮಾರಂಭದ ವೇಳೆ ಶಾಸಕ ಝಮೀರ್ ಬೆಂಬಲಿಗರ ವರ್ತನೆಗೆ ಕೈನಾಯಕರು ಆಕ್ರೋಶ

Update: 2021-11-17 07:33 GMT

ಬೆಂಗಳೂರು, ನ.16: ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಸಮಾರಂಭದ ವೇಳೆ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಅವರ ಬೆಂಬಲಿಗರ ವರ್ತನೆಗೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು. ಆದರೆ, ಸಮಾರಂಭದಲ್ಲಿ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಗೈರಾಗಿದ್ದರು. ಇದನ್ನು ಕಂಡ ಅವರ ಬೆಂಬಲಿಗರು ಝಮೀರ್ ಅಹ್ಮದ್ ಖಾನ್ ಅವರ ಭಾವಚಿತ್ರಗಳನ್ನು ಹಿಡಿದು ಘೋಷಣೆ ಕೂಗಿದರು.

ಹಲವು ನಾಯಕರು ಸಮಾರಂಭವನ್ನುದ್ದೇಶಿಸಿ ಮಾತನಾಡಲು ತೊಡಗಿದಾಗ ನೂರಕ್ಕೂ ಅಧಿಕ ಬೆಂಬಲಿಗರು ಝಮೀರ್ ಪರ ಘೋಷಣೆಗಳನ್ನು ಕೂಗಿ ಭಾಷಣವನ್ನು ಅಡ್ಡಿಪಡಿಸುವ ಪ್ರಯತ್ನ ಮಾಡಿದ ಪ್ರಸಂಗ ಜರುಗಿತು.

ಇನ್ನೂ, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುವ ಸಂದರ್ಭದಲ್ಲೂ ಬೆಂಬಲಿಗರ ಘೋಷಣೆಗಳ ಬಿಸಿ ತಟ್ಟಿತು.ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಅವರು ಫಲಕಗಳನ್ನು ಕೆಳಗೆ ಇಳಿಸುವಂತೆ ಗದರಿ, ಘೋಷಣೆಗಳನ್ನು ಕೂಗುವುದನ್ನು ನಿಲ್ಲಿಸುವಂತೆ ಸೂಚಿಸಿದರು.

ಆದರೂ, ಪಟ್ಟುಬಿಡದ ಬೆಂಬಲಿಗರು ಘೋಷಣೆಗಳನ್ನು ಮುಂದುವರಿಸಿದ ಕಾರಣ ಸಿದ್ದರಾಮಯ್ಯ ಅವರು ತಮ್ಮ ಭಾಷಣವನ್ನೆ ಮೊಟುಕುಗೊಳಿಸಿದರು. ಬಳಿಕ ಇವರು ಯಾರು ಎಂದು ವೇದಿಕೆಯಲ್ಲಿದ್ದ  ಶಾಸಕ ಎನ್.ಎ.ಹಾರೀಸ್ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ಇವರೆಲ್ಲಾ ಚಾಮರಾಜಪೇಟೆಯವರು, ಝಮೀರ್ ಬೆಂಬಲಿಗರು. ಝಮೀರ್ ವೇದಿಕೆಗೆ ಬಂದಿಲ್ಲವೆಂದು ಬೆಳಗ್ಗೆಯಿಂದಲೇ ಹೀಗೆ ವರ್ತನೆ ಮಾಡುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಂತಹ ವರ್ತನೆಗಳು ಅನವಶ್ಯಕ. ಯಾರು ಈ ರೀತಿ ಕಾರ್ಯಕ್ರಮಗಳನ್ನು ಹಾಳು ಮಾಡಲು ಯತ್ನಿಸಬಾರದೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ದ್ರೋಹಿಗಳು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ರೀತಿಯ ವರ್ತನೆಗಳನ್ನು ನಾನು ಸಹಿಸುವುದಿಲ್ಲ.ಇಂತಹವರು ಕಾಂಗ್ರೆಸ್ ದ್ರೋಹಿಗಳು. ಯಾರು ಹೀಗೆ ಮಾಡುತ್ತಿದ್ದರೂ, ಅವರನ್ನು ಕಾಂಗ್ರೆಸ್ ಪಕ್ಷದಿಂದಲೇ ಹೊರಹಾಕಲಾಗುವುದು. ಇಂತಹ ಪುಂಡಾಟಿಕೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಕೀಲ್ ನವಾಝ್‍ಗಾಗಿ ಗೈರು?

ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಶಕೀಲ್ ನವಾಝ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು.ಆದರೆ, ಕೆ.ಅಬ್ದುಲ್ ಜಬ್ಬಾರ್ ಈ ಸ್ಥಾನಕ್ಕೆ ನೇಮಕಗೊಂಡಿರುವುದಕ್ಕೆ ಝಮೀರ್ ಅಸಮಾಧಾನಗೊಂಡಿದ್ದು, ಹೀಗಾಗಿಯೇ, ಪ್ರಮುಖ ಸಮಾರಂಭಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News