ಬೆಂಗಳೂರು; ಡೆಂಗ್ಯೂ -ಚಿಕೂನ್ ಗುನ್ಯ ಪ್ರಕರಣ ಅಧಿಕ

Update: 2021-11-16 17:55 GMT

ಬೆಂಗಳೂರು, ನ.16: ನಿರಂತರ ಮಳ ಹಿನ್ನೆಲೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯ ರೋಗದ ಪ್ರಕರಣಗಳು ಉಲ್ಬಣವಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ನಗರದಲ್ಲಿ ನಿರಂತರವಾಗಿ ಚಳಿ ಹಾಗೂ ಮಳೆಯೂ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಕಳೆದ ಹತ್ತು ದಿನದ ಅಂತರದಲ್ಲಿ ಡೆಂಘಿ ಹಾಗೂ ಚಿಕೂನ್ ಗುನ್ಯ ಪ್ರಕರಣ ಹೆಚ್ಚಳವಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಆರೋಗ್ಯ ಇಲಾಖೆಯ ಮಾಹಿತಿ ಅನ್ವಯ ರಾಜ್ಯದಲ್ಲಿ ಒಟ್ಟು 5,185 ಡೆಂಗ್ಯೂ , 1,621 ಚಿಕೂನ್ ಗುನ್ಯ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ನಗರದ ವಲಯ ಮಟ್ಟದಲ್ಲಿಯೇ ಅತಿ ಹೆಚ್ಚು ಎಂದರೆ ಡೆಂಗ್ಯೂ 1,048, ಚಿಕೂನ್ ಗುನ್ಯ 53 ಪ್ರಕರಣಗಳು ಕಂಡುಬಂದಿವೆ. ಆದರೆ, ಇದುವರೆಗೆ ಡೆಂಗ್ಯೂ ಜ್ವರದಿಂದ ಯಾರೂ ಮೃತಪಟ್ಟಿಲ್ಲ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಹವಾಮಾನ ವೈಪರೀತ್ಯ ಹಾಗೂ ಇತರೆ ಕಾರಣಗಳಿಂದ ಬೆಂಗಳೂರಿನಲ್ಲಿ ಡೆಂಗ್ಯೂ ಜೊತೆಗೆ ಮಕ್ಕಳಿಗೆ ವೈರಲ್ ಫೀವರ್ ಹೆಚ್ಚಾಗಿದ್ದು, ಪಾಲಕರಲ್ಲಿ ಆತಂಕ ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳ ವೈದ್ಯರು ಸಿಬಿಸಿ, ಡೆಂಘಿ ಪರೀಕ್ಷೆ ಸೇರಿ ಇತ್ಯಾದಿಗಳಿಗೆ ಚೀಟಿ ಬರೆದು ಕೊಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ(ಆರೋಗ್ಯ) ಆಯುಕ್ತ ತ್ರಿಲೋಕ್ ಚಂದ್ರ, ಡೆಂಗ್ಯೂ ನಿಯಂತ್ರಣಕ್ಕೆ  ಹೆಚ್ಚು ಗಮನ ಹರಿಸಿದ್ದು, ಈಗಾಗಲೇ ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News