ಮೂಲಭೂತ ಸೌಲಭ್ಯ ವಂಚಿತ ತಲಕಾವೇರಿ ಪ್ರಾಥಮಿಕ ಶಾಲೆ

Update: 2021-11-17 05:12 GMT

ಮಡಿಕೇರಿ: ಕಾವೇರಿಯ ಉಗಮಸ್ಥಾನ ಪುಣ್ಯಕ್ಷೇತ್ರ ತಲಕಾವೇರಿ ವ್ಯಾಪ್ತಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಹೇಳುತ್ತಿರುವ ಈ ಜ್ಞಾನ ದೇಗುಲದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ, ಪಾಠ ಹೇಳಲು ಒಬ್ಬರೇ ಶಿಕ್ಷಕರಿದ್ದಾರೆ.

ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕೆನ್ನುವುದು ಸರಕಾರದ ಅಪೇಕ್ಷೆ ಮತ್ತು ಘೋಷಣೆ. ಆದರೆ ಗ್ರಾಮೀಣ ಶಾಲೆಗಳ ಸ್ಥಿತಿಗತಿಯನ್ನು ಗಮನಿಸಿದರೆ ಸರಕಾರಿ ಶಾಲೆಗಳ ಬಗ್ಗೆ ಸರಕಾರಕ್ಕೆ ನೈಜ ಕಾಳಜಿ ಇದ್ದಂತ್ತಿಲ್ಲ. ಭಾಗಮಂಡಲ ಗ್ರಾ.ಪಂ ವ್ಯಾಪ್ತಿಯ ತಲಕಾವೇರಿ ಕಿರಿಯ ಪ್ರಾಥಮಿಕ ಶಾಲೆ ಇದಕ್ಕೆ ಮೂಕ ಸಾಕ್ಷಿಯಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಅಕ್ಷರ ದಾಸೋಹದ ಅಡುಗೆ ಕೋಣೆ ಆತಂಕವನ್ನು ಸೃಷ್ಟಿಸಿದೆ. ಮೇಲ್ಚಾವಣಿಯ ಮರಗಳು ಗೆದ್ದಲು ಹಿಡಿದಿದ್ದು, ಬೀಳುವ ಹಂತದಲ್ಲಿದೆ. 

ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖಕ್ಕೆ ಶಿಕ್ಷಕರ ಕೊರತೆಯೇ ಕಾರಣ

ಸುಣ್ಣ, ಬಣ್ಣ ಕಾಣದ ಶಾಲೆಯನ್ನು ಅವ್ಯವಸ್ಥೆಗಳು ಕಾಡುತ್ತಿವೆ. 1 ರಿಂದ 5ನೇ ತರಗತಿ ವರೆಗಿನ ಈ ಶಾಲೆಯಲ್ಲಿ ತಲಕಾವೇರಿ ಸಮೀಪದ ಕೆಂಪುರಾಶಿಮೊಟ್ಟೆ ಪರಿಶಿಷ್ಟರ ಕಾಲೋನಿಯ ಒಂಭತ್ತು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಲು ಶಿಕ್ಷಕರ ಕೊರತೆಯೇ ಕಾರಣವಾಗಿದೆ. ಒಬ್ಬರು ಅತಿಥಿ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಖಾಯಂ ಶಿಕ್ಷಕರ ನೇಮಕಕ್ಕೆ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನ ಸಿಕ್ಕಿಲ್ಲವೆಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಹೆಚ್.ಆರ್.ಲಕ್ಷ್ಮಿ ಹಾಗೂ ಸದಸ್ಯ ಹೆಚ್.ಕೆ.ಜಯಂತ್ ಬೇಸರ ವ್ಯಕ್ತಪಡಿಸಿದ್ದಾರೆ. 

ಮೂಲಭೂತ ಸೌಲಭ್ಯ ಮತ್ತು ಶಿಕ್ಷಕರಿಲ್ಲದ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿರುವ ಈ ಭಾಗದ ಪೋಷಕರು ಭಾಗಮಂಡಲ ಮತ್ತಿತರೆಡೆ ಖಾಸಗಿ ಶಾಲೆಗಳಿಗೆ ಸೇರ್ಪಡೆಗೊಳಿಸಿದ್ದಾರೆ. ಆದರೆ ಆರ್ಥಿಕವಾಗಿ ಸಬಲರಲ್ಲದ ಪರಿಶಿಷ್ಟರ ಮಕ್ಕಳು ಮಾತ್ರ ತಲಕಾವೇರಿ ಶಾಲೆಯನ್ನು ಅವಲಂಬಿಸಿದ್ದಾರೆ. ಕಾಡುತ್ತಿರುವ ಕೊರತೆಗಳು ಈ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ.

ನೀರು, ವಿದ್ಯುತ್ ಇಲ್ಲ !

ಶಾಲೆಯೊಂದಕ್ಕೆ ಅಗತ್ಯವಾಗಿ ಬೇಕಾಗಿರುವ ನೀರು ಮತ್ತು ವಿದ್ಯುತ್ ವ್ಯವಸ್ಥೆಯೇ ಇಲ್ಲಿ ಇಲ್ಲದಾಗಿದೆ. ವಿದ್ಯುತ್ ಬಿಲ್ ರೂ.3 ಸಾವಿರ ಪಾವತಿಸಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಈ ಕಾರಣದಿಂದ ಮೋಟಾರ್ ಕಾರ್ಯನಿರ್ವಹಿಸದೆ ನೀರು ಸರಬರಾಜು ಕೂಡ ನಿಂತು ಹೋಗಿದೆ. ಅಕ್ಷರ ದಾಸೋಹದ ದಿನಸಿ ಸಾಮಾಗ್ರಿಗಳಿಗೂ ಕೊರತೆ ಉಂಟಾಗಿದೆ.

ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯ ಫಲವಾಗಿ ಪರಿಶಿಷ್ಟ ವಿದ್ಯಾರ್ಥಿಗಳೇ ಇರುವ ಶಾಲೆ ಇದ್ದೂ ಇಲ್ಲದಂತ್ತಾಗಿದೆ. ಶಾಲಾಭಿವೃದ್ಧಿ ಸಮಿತಿಯ ಮನವಿಗೆ ಸ್ಪಂದನೆಯೇ ಇಲ್ಲದಾಗಿದೆ. ತಕ್ಷಣ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಕಾಯಕಲ್ಪ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಖಾಯಂ ಶಿಕ್ಷಕರನ್ನು ನೇಮಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News