ಬಿಜೆಪಿ ಜನಸ್ವರಾಜ್ ಯಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

Update: 2021-11-18 08:35 GMT

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿರುವ ಜನ ಸ್ವರಾಜ್ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಪ್ಪಳದಲ್ಲಿ ಕಹಳೆ ಊದುವ ಮೂಲಕ ಇಂದು ಚಾಲನೆ ನೀಡಿದರು.

ಪರಿಷತ್ ಚುನಾವಣೆಗೆ ಪೂರ್ವತಯಾರಿ ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆಯ ಉದ್ದೇಶದಿಂದ ಹಮ್ಮಿಕೊಂಡಿರುವ ಬಿಜೆಪಿ ಜನಸ್ವರಾಜ್ ಯಾತ್ರೆಗೆ ಚಾಲನೆ ನೀಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಜೆಪಿಯ ಜನ ಸ್ವರಾಜ್ ಕಾರ್ಯಕ್ರಮಕ್ಕಾಗಿ ಕೊಪ್ಪಳ ಪ್ರವಾಸವನ್ನು ಕೈಗೊಳ್ಳುತ್ತಿದ್ದೇನೆ. ಪಕ್ಷದ ಹಿರಿಯ ನಾಯಕರು ಬಿ.ಎಸ್.ವೈ, ಜಗದೀಶ್ ಶೆಟ್ಟರ್ , ಕೆ.ಎಸ್.ಈಶ್ವರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಾಲ್ಕು ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಅಲ್ಲಿನ ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿ ಮುಂಬರುವ ವಿಧಾನ ಪರಿಷತ್ತಿನ ಚುನಾವಣೆಗೆ ಮತದಾರರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚಿಸಲಾಗುವುದು. ನ. 22ರಂದು ಮಡಿಕೇರಿಯಲ್ಲಿ ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ  ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ಈಗಾಗಲೇ 2 ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳಿಸಲಾಗಿದೆ. ಇಂದು ಸಂಜೆ ಅಂತಿಮ ಪಟ್ಟಿ ಅನುಮೋದನೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಬೆಳೆಹಾನಿಗೆ ಪರಿಹಾರ

ಕೊಪ್ಪಳ ಪ್ರವಾಸದ ನಂತರ ಬೆಳೆಹಾನಿ ಸಮೀಕ್ಷೆ ವರದಿ ತರಿಸಿಕೊಂಡು ಬೆಳೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ, ಸಚಿವರಾದ ಮುರುಗೇಶ್ ನಿರಾಣಿ, ಹಾಲಪ್ಪ ಆಚಾರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರೆ ಜನಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News