ಬೆಂಗಳೂರಿನಲ್ಲಿ ಮುಂದುವರೆದ ಮಳೆ

Update: 2021-11-18 13:49 GMT

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮುಂದುವರೆದಿದ್ದು, ಹಲವು ಕಡೆ ಮನೆಗಳ ಗೋಡೆ ಕುಸಿದು ಮತ್ತೆ ಆತಂಕ ಸೃಷ್ಟಿಯಾಗಿದೆ. ಇಲ್ಲಿನ  ಶಂಕರಮಠ ವಾರ್ಡಿನ ಕಾವೇರಿನಗರ, ಆಂಜನೇಯ ಗುಡ್ಡ ಪ್ರದೇಶ ವ್ಯಾಪ್ತಿಯಲ್ಲಿ ಮನೆ ಗೋಡೆ ಕುಸಿದಿದ್ದು, ಇದರ ಪರಿಣಾಮ ಮನೆಯಲ್ಲಿ ಪಾತ್ರೆ, ಸಾಮಾಗ್ರಿಗಳು ಹಾನಿಯಾಗಿದೆ.

ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಬಿಬಿಎಂಪಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ, ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಮಾಡಿದ ಅವರು ಮನೆಯ ಮಾಲಕರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಅದೇ ರೀತಿ, ಇಲ್ಲಿನ ಪಾದರಾಯನಪುರ ವ್ಯಾಪ್ತಿಯ ಐಸ್ ಫ್ಯಾಕ್ಟರಿಯ ಬೃಹತ್ ಗೋಡೆ  ಕುಸಿದ ಪರಿಣಾಮ ಆಟೋಗಳು ಜಖಂಗೊಂಡಿದೆ. ಘಟನೆ ಸ್ಥಳಕ್ಕೆ  ಬಿಬಿಎಂಪಿ ವಲಯ ಅಧಿಕಾರಿಗಳು ಭೇಟಿ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಮನೆಯ ಮಾಲಕರು, ಈ ಹಿಂದೆಯೂ ಮನೆಯ ಒಂದು ಮೂಲೆ ಕುಸಿದಿತ್ತು. ಈಗ ಮತ್ತೊಮ್ಮೆ ಗೋಡೆ ಕುಸಿದಿದೆ. ಸದ್ಯ ಮನೆಯಿಂದ ಖಾಲಿ ಮಾಡಿಸಿ ಅಧಿಕಾರಿಗಳು ತೆರಳಿದ್ದಾರೆ. ಮನೆ ಒಳಗೆ ಹೋಗದೆ ಹೊರಗೆ ನಿಂತಿದ್ದೇವೆ. ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮತ್ತೊಂದೆಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದ್ದು, ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.

ನಗರದೆಲ್ಲೆಡೆ ಹಲವು ದಿನಗಳಿಂದ ಜಿಟಿಜಿಟಿ  ಮಳೆ ಮುಂದುವರೆದಿದ್ದು, ದಿನವಿಡೀ ಚಳಿಯ ವಾತಾವರಣ ನಿರ್ಮಾಣಗೊಂಡಿದೆ. ಶಿವಾಜಿನಗರ, ಆರ್‌ಟಿನಗರ ಇಂದಿರಾನಗರ, ಬಸವೇಶ್ವರನಗರ, ರಾಜಾಜಿನಗರದ, ಹಲಸೂರು, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಪೀಣ್ಯ, ಮಹಾಲಕ್ಷ್ಮಿ ಲೇಔಟ್, ಸಂಪಂಗಿರಾಮನಗರ, ನಾಗರಬಾವಿ, ಕೆಂಗೇರಿ, ಕೆ.ಆರ್.ಪುರ, ರಾಜರಾಜೇಶ್ವರಿನಗರ, ಅನ್ನಪೂರ್ಣೇಶ್ವರಿನಗರ, ಬನಶಂಕರಿ, ಹೆಬ್ಬಾಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬೆಳಗ್ಗೆಯಿಂದಲೆ ನಿರಂತರವಾಗಿ ಮಳೆ ಸುರಿಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News