'ಮಾಂಸಾಹಾರಿ ಹೊಟೇಲ್‌ಗಳನ್ನು ಮುಚ್ಚುವ ಗುಜರಾತ್ ಮಾದರಿ ನಮಗೆ ಬೇಡ': ಹಂಸಲೇಖರಿಗೆ ವಿದ್ಯಾರ್ಥಿಗಳ ಬೆಂಬಲ

Update: 2021-11-18 14:40 GMT

ಬೆಂಗಳೂರು, ನ. 18: ಸಂಗೀತ ನಿರ್ದೇಶಕ ಹಂಸಲೇಖ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅವಹೇಳನ ಮಾಡುತ್ತಿರುವ `ಬ್ರಾಹ್ಮಣಶಾಹಿ, ಜಾತಿವಾದಿಗಳ' ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಹಂಸಲೇಖ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ವಿಶ್ವ ವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರದರ್ಶನ ನಡೆಸಲಾಯಿತು.

ಗುರುವಾರ ಬೆಳಗ್ಗೆ ಇಲ್ಲಿನ ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಮುಂಭಾಗದಲ್ಲಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಸಂಗೀತ ನಿರ್ದೇಶಕ ಹಂಸಲೇಖ ಬೆಂಬಲಿಸಿ, `ನಿಮ್ಮೊಂದಿಗೆ ನಾವಿದ್ದೇವೆ, ಶೋಷಿತ ಸಮುದಾಯಗಳ ವಿರುದ್ಧ ಕುತಂತ್ರ ನಡೆಸುತ್ತಿರುವ ಜಾತಿವಾದಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿದರು.

ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ವಿವಿ ಬಿ.ಬಸವಲಿಂಗಪ್ಪ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಟಿ.ಎಚ್. ಮೂರ್ತಿ ಮಾತನಾಡಿ, `ರಾಜ್ಯದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ. ಎರಡು ವರ್ಷದ ದಲಿತ ಹಸುಳೆ ದೇವಸ್ಥಾನ ಪ್ರವೇಶಿಸಿತು ಎಂದು ಆತನ ಪೋಷಕರನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಕೊಪ್ಪಳದಲ್ಲಿ ಇಂದಿಗೂ ಹೊಟೇಲ್ ಪ್ರವೇಶವಿಲ್ಲ. ಹೀಗಿರುವಾಗ ಸಂಗೀತ ನಿರ್ದೇಶನ ಹಂಸಲೇಖ ಇತ್ತಿಚೆಗೆ ನೀಡಿದ ಹೇಳಿಕೆಯಲ್ಲಿ ಯಾವುದೇ ರೀತಿಯಲ್ಲಿಯೂ ತಪ್ಪಿಲ್ಲ' ಎಂದು ಹೇಳಿದರು.

"ಉಡುಪಿಯ ಪೇಜಾವರ ಶ್ರೀಗಳು ಸೇರಿದಂತೆ ಮೇಲ್ಜಾತಿಯವರು ಹೊಲೆ-ಮಾದಿಗರ ಕೇರಿಗೆ ಹಾಗೂ ಅವರ ಮನೆಗಳಿಗೆ ಬರುವುದೇ ಒಂದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಅಸ್ಪೃಶ್ಯತೆಯ ಪ್ರತಿರೂಪವನ್ನು ಎತ್ತಿತೋರಿಸುತ್ತದೆಯೇ ಹೊರತು ಅಸ್ಪೃಶ್ಯತೆಯನ್ನು ತೊಲಗಿಸುವುದಿಲ್ಲ. ಪೇಜಾವರ ಶ್ರೀಗಳು ದಲಿತರ ಕೇರಿಗೆ ಬರುವ ಬದಲು ಬ್ರಾಹ್ಮಣರ ಅಗ್ರಹಾರಗಳಿಗೆ ಹೋಗಿ ಪಾದ ಪೂಜೆಮಾಡಿಸಿಕೊಳ್ಳಲಿ, ಅದನ್ನು ಬಿಟ್ಟು ದಲಿತರ ಮನೆ ಪ್ರವೇಶ ಮಾಡಿರುವುದೇ ದೊಡ್ಡಸಾಧನೆ ಎಂದು ಬಿಂಬಿಸಿದ್ದಾದರೂ ಏಕೆ?, ನಮ್ಮ ಕೇರಿಗೆ ಬರುವ ಮೂಲಕ ಅಸ್ಪೃಶ್ಯತೆ ಜೀವಂತವಾಗಿದೆ ಎಂದು ತೋರಿಸಲಿಕ್ಕೆ ನೀವು ಬರುತ್ತೀರಿ' ಎಂದು ಟಿ.ಎಚ್.ಮೂರ್ತಿ ವಾಗ್ದಾಳಿ ನಡೆಸಿದರು.

'ತಾಕತ್ತಿದ್ದರೆ ಮನುಧರ್ಮ ಕನ್ನಡಕ್ಕೆ ತನ್ನಿ': "ಬ್ರಾಹ್ಮಣಶಾಹಿಗಳಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಹೀಗಾಗಿ ಇವರಿಗೆ ನಿಜಕ್ಕೂ ತಾಕತ್ತು ಇದ್ದರೆ `ಮನುಧರ್ಮ', ಗಾಯತ್ರಿ ಮಂತ್ರವನ್ನು ಯಾವುದೇ ತಿದ್ದುಪಡಿ ಇಲ್ಲದೆ, ಯಾತಾವತ್ತಾಗಿ ಕನ್ನಡಕ್ಕೆ ಭಾಷಾಂತರ ಮಾಡಿ ತರಬೇಕು. ಆ ಧೈರ್ಯ ನಿಮಗೆ ಇಲ್ಲ. ಏಕೆಂದರೆ ಕನ್ನಡದಲ್ಲಿ ತಂದರೆ ನಿಮ್ಮ ಅಸಲಿ ಬಣ್ಣ ಜನರಿಗೆ ಗೊತ್ತಾಗುತ್ತದೆ' ಎಂದು ಮೂರ್ತಿ ಟೀಕಿಸಿದರು.

"ಗುಜರಾತ್ ಮಾದರಿ ಎಂದು ದೇಶಕ್ಕೆ ಹೇಳಲಾಗುತ್ತಿದೆ. ಗುಜರಾತ್ ಮಾದರಿ ಎಂದರೆ ಶಾಲೆಗಳನ್ನು ಮತ್ತು ಮಾಂಸಾಹಾರಿ ಹೊಟೇಲ್‌ಗಳನ್ನು ಮುಚ್ಚುವುದೇ ಆಗಿದೆ. ಕರ್ನಾಟಕ ರಾಜ್ಯದಲ್ಲಿ ಇಂತಹ ಪ್ರಯೋಗಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಜಾರಿಯಲ್ಲಿರುವವರೆಗೂ ಸಾಧ್ಯವಿಲ್ಲ. ಬ್ರಾಹ್ಮಣಿಕೆ ಮತ್ತು ಮನುಧರ್ಮದ ಏರಿಕೆ ಕೂಡಲೇ ನಿಲ್ಲಿಸಬೇಕು. ದಲಿತರು ಈ ದೇಶದ ಮೂಲ ನಿವಾಸಿಗಳು" ಎಂದು ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

"ಹಂಸಲೇಖ ಬಹಿರಂಗ ಕ್ಷಮೆಕೋರಿದ ಬಳಿಕವೂ ಅವರ ವಿರುದ್ಧ ಬ್ರಾಹ್ಮಣ ಮಹಾಸಭಾ ದೂರು ದಾಖಲಿಸಿದ್ದು, ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಅವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಆತಂಕಕಾರಿ ಮತ್ತು ಅತ್ಯಂತ ಅಪಾಯಕಾರಿ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ' ಎಂದು ಬೆಂಗಳೂರು ವಿವಿಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಮುಖಂಡ ಸುಭಾಷ್ ಎಚ್ಚರಿಕೆ ನೀಡಿದರು.

ಬಿಟ್ ಕಾಯಿನ್ ಹಗರಣ ಸಂಬಂಧ ಸೂಕ್ತ ತನಿಖೆಗೆ ಆಗ್ರಹಿಸಿದ ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಸಂಸದ ಪ್ರತಾಪ್ ಸಿಂಹ ಅನಗತ್ಯವಾಗಿ ತೇಜೋವಧೆ ಮಾಡಿದ್ದು, ಅವರ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅವರ ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ದಲಿತರು ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅವರು ತಿಳಿಸಿದರು.

"ವೈದಿಕಶಾಹಿಗಳ ವಿರುದ್ದ ಶತಶತಮಾನಗಳಿಂದಲೂ ಸಂಘರ್ಷ ನಡೆಯುತ್ತಿದೆ. ಹಂಸಲೇಖ ಅವರು ಹೊಸ ವಿಚಾರಗಳನ್ನೇನು ಹೇಳಿಲ್ಲ. ಅವರು ಎತ್ತಿರುವ ಪ್ರಶ್ನೆಗಳನ್ನು ಬದಿಗಿಟ್ಟು ವೈಯಕ್ತಿಕ ನಿಂದನೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದೆ ಎಂದು ಸಂಘಪರಿವಾರದ ಆಟಾಟೋಪ ಮಿತಿ ಮೀರಿದೆ. ಹಂಸಲೇಖ ವಿರುದ್ಧ ದೂರು, ನೀಡಿದರೆ ಶೋಷಿತ ಸಮುದಾಯ ಜಗ್ಗುವುದಿಲ್ಲ. ವೈಚಾರಿಕ ಸಂಘರ್ಷ ಇದಾಗಿದ್ದು, ತಳ ಸಮುದಾಯಗಳು ಸೂಕ್ತ ಪ್ರತ್ಯುತ್ತರ ನೀಡಲಿವೆ"
-ಮಾವಳ್ಳಿ ಶಂಕರ್, ದಸಂಸ ರಾಜ್ಯ ಪ್ರಧಾನ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News