ಆಯುರ್ವೇದ-ಯುನಾನಿ ಮಂಡಳಿಯಲ್ಲಿ ಭ್ರಷ್ಟಾಚಾರ ಆರೋಪ: ಎಸಿಬಿ ಬಲೆಗೆ ಬಿದ್ದ ರಿಜಿಸ್ಟ್ರಾರ್

Update: 2021-11-18 16:20 GMT

ಬೆಂಗಳೂರು, ನ.18: ನಾಟಿ ಔಷಧಿ ಕ್ಲಿನಿಕ್ ನಡೆಸುವ ಸಲುವಾಗಿ ಪರವಾನಿಗೆ ನೀಡಲು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ರಿಜಿಸ್ಟ್ರಾರ್ ಎಸಿಬಿ ಬಲೆಗೆ ಬಿದಿದ್ದಾನೆ.

ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ರಿಜಿಸ್ಟ್ರಾರ್ ಡಾ.ಶಹುಬುದ್ದೀನ್ ವಿರುದ್ಧ ಬೆಂಗಳೂರು ನಗರ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದ ನಿವಾಸಿಯೊಬ್ಬರು 1992ನೇ ಸಾಲಿನಿಂದ ನಾಟಿ ಔಷಧಿಯನ್ನು ನೀಡುವ ಕ್ಲಿನಿಕ್ ನಡೆಸುತ್ತಿದ್ದಾರೆ. ಪಾರಂಪರಿಕ ವೈದ್ಯ ವೃತ್ತಿಯನ್ನು ಮುಂದುವರೆಸಲು ಪ್ರಮಾಣ ಪತ್ರವನ್ನು ಪಡೆಯುವ ಸಲುವಾಗಿ ಕರ್ನಾಟಕ ಆಯುರ್ವೇದ ಮತ್ತು ಯೂನಾನಿ ವೈದ್ಯ ಮಂಡಳಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಪ್ರಮಾಣ ಪತ್ರವನ್ನು ನೀಡಲು ಆರೋಪಿ ರಿಜಿಸ್ಟ್ರಾರ್ ಡಾ.ಶಹುಬುದ್ದೀನ್, ಅರ್ಜಿದಾರರಿಂದ ಬರೋಬ್ಬರಿ 1 ಲಕ್ಷ 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ. ಜತೆಗೆ, 1 ಲಕ್ಷ 20 ಸಾವಿರ ರೂ. ಲಂಚ ಪಡೆದಿದ್ದ ಎಂದು ಆರೋಪಿಸಲಾಗಿದೆ. ಇದಾದ ಬಳಿಕ 30 ಸಾವಿರ ರೂ. ಬಾಕಿ ಹಣ ಸ್ವೀಕರಿಸಲು ಮುಂದಾಗಿದ್ದ ವೇಳೆ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ ಪ್ರಕರಣ ಭೇದಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News