ಬಾಡಿಗೆ ಬಾಕಿ, ಅಕ್ರಮ ವಾಸ ಆರೋಪ ನೋಟಿಸ್:‌ ಕಚೇರಿ ತೆರವುಗೊಳಿಸಿದ ಗ್ರೇಟರ್‌ ಕಾಶ್ಮೀರ್‌ ಪತ್ರಿಕೆ

Update: 2021-11-19 12:41 GMT

ಶ್ರೀನಗರ್: ಗ್ರೇಟರ್ ಕಾಶ್ಮೀರ್ ಪತ್ರಿಕೆ ಗುರುವಾರ ಶ್ರೀನಗರದಲ್ಲಿರುವ ತನ್ನ ಕಚೇರಿಯನ್ನು ತೆರವುಗೊಳಿಸಿದೆ. ಪತ್ರಿಕೆಯ ಕಚೇರಿ ಸರಕಾರಿ ಆಸ್ತಿಯಾಗಿರುವುದರಿಂದ ಬಾಡಿಗೆ ಬಾಕಿ ಹಾಗೂ ಅಕ್ರಮ ವಾಸ  ಎಂದು ಆರೋಪಿಸಿ ಸಂಸ್ಥೆಗೆ ಇತ್ತೀಚೆಗೆ ನೋಟಿಸ್ ಜಾರಿಯಾಗಿತ್ತು.

ಶ್ರೀನಗರದ ಮುಶ್ತಾಖ್ ಪ್ರೆಸ್ ಎನ್‍ಕ್ಲೇವ್‍ನಲ್ಲಿ  ಈ ಕಚೇರಿಯನ್ನು ಪತ್ರಿಕೆಗೆ 2001ರಲ್ಲಿ ಮಂಜೂರುಗೊಳಿಸಲಾಗಿತ್ತು. ಗುರುವಾರ ಪತ್ರಿಕೆಯ ಮುಖ್ಯ ಸಂಪಾದಕ ಫಯಾಝ್ ಕಾಲೂ ಅವರಿಗೆ ಎಸ್ಟೇಟ್ಸ್ ಉಪನಿರ್ದೇಶಕರಿಂದ ನೋಟಿಸ್ ಜಾರಿಯಾಗಿತ್ತು ಹಾಗೂ ಅದರಲ್ಲಿ ಪತ್ರಿಕೆಗೆ ಕಚೇರಿಯನ್ನು ಮಂಜೂರುಗೊಳಿಸುವಾಗ ನಿಗದಿಪಡಿಸಲಾಗಿದ್ದ ಅವಧಿ ಕೊನೆಗೊಂಡಿದೆ ಎಂದು ಹೇಳಲಾಗಿದೆಯಲ್ಲದೆ ಈ ನಿಟ್ಟಿನಲ್ಲಿ ಯಾವುದೇ ವಿಸ್ತರಣೆಯನ್ನು ಮಾಡಲಾಗಿಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಪತ್ರಿಕೆ ರೂ. 13,383 ಬಾಡಿಗೆ ಬಾಕಿಯಿರಿಸಿದೆ ಎಂದೂ ಅದರಲ್ಲಿ ತಿಳಿಸಲಾಗಿದೆ.

ಕಚೇರಿ ತೆರವುಗೊಳಿಸಲು ನವೆಂಬರ್ 24ರ ತನಕ ಕಾಲಾವಕಾಶವಿದ್ದರೂ ಗುರುವಾರವೇ ಎಲ್ಲಾ ಪೀಠೋಪಕರಣ ಮತ್ತಿತರ ಸಾಮಗ್ರಿಗಳನ್ನು ತೆರವುಗೊಳಿಸಿ ರಂಗ್ರೇತ್ ಪ್ರದೇಶಕ್ಕೆ ಪತಿಕೆಯ ಕಚೇರಿ ಸ್ಥಳಾಂತರಗೊಂಡಿದೆ. ಪತ್ರಿಕೆಯ ಇನ್ನೊಂದು ಪ್ರಕಟಣೆಯಾಗಿರುವ ಕಾಶ್ಮೀರ್ ಉಝ್ಮಾ ಕೂಡ ರಂಗ್ರೇತ್ ಪ್ರದೇಶದಿಂದಲೇ ಕಾರ್ಯಾಚರಿಸಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News