ಬೆಂಗಳೂರಿನಲ್ಲಿ ಮುಂದುವರಿದ ಮಳೆ: ಮತ್ತೊಂದು ಹಳೇ ಕಟ್ಟಡ ಕುಸಿತ
ಬೆಂಗಳೂರು, ನ.19: ನಗರದಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಹಾಮಳೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಹಲಸೂರು ವಾರ್ಡ್‍ನ ಮಿಲ್ಕ್ ಮ್ಯಾನ್ ಸ್ಟ್ರೀಟ್‍ನಲ್ಲಿ ಶುಕ್ರವಾರ ಮುಂಜಾನೆ 6 ಗಂಟೆಗೆ ಕಟ್ಟಡವೊಂದು ಕಸಿದಿದೆ.
58 ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು, ಕುಸಿದು ಬಿದ್ದಿದ್ದು ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆಲ ಮತ್ತು ಮೊದಲ ಮಹಡಿಯನ್ನು ಹೊಂದಿರುವ ಸುಮಾರು 20 ಚದರ ಅಡಿ ಕಟ್ಟಡವು ಕುಸಿದಿದ್ದು, ಈ ಕಟ್ಟಡವನ್ನು ಮಣ್ಣು ಹಾಗೂ ಇಟ್ಟಿಗೆಯಿಂದ ಮಾತ್ರ ನಿರ್ಮಿಸಲಾಗಿದೆ. ಶಿಥಿಲಗೊಂಡಿದ್ದ ಕಟ್ಟಡಕ್ಕೆ ಪಾಲಿಕೆ ಈಗಾಗಲೇ ನೋಟಿಸ್ ನೀಡಿ ಮಾಲಕರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಲಾಗಿತ್ತು. ಕಟ್ಟಡ ಕುಸಿದ ವೇಳೆ ಯಾವುದೇ ಪ್ರಾಣಹಾನಿ ಆಗಿಲ್ಲ. ಪ್ರಸ್ತುತ ಕಟ್ಟಡ ತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ಸ್ಥಳದಲ್ಲಿ ಇನ್ನೆರಡು ಕಟ್ಟಡಗಳು ಶಿಥಿಲಗೊಂಡಿದ್ದು, ಅವನ್ನು ಕೂಡಾ ಇಂದು ನೆಲಸಮಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.