ಜಮ್ಮು: ಗುಂಡಿನ ಚಕಮಕಿಯಲ್ಲಿ ನಾಗರಿಕರು ಸಾವು ಪ್ರಕರಣ; ನ್ಯಾಯಾಂಗ ತನಿಖೆ ಕೋರಿ ರಾಷ್ಟ್ರಪತಿಗೆ ಗುಪ್ಕರ್ ಅಲಯನ್ಸ್ ಪತ್ರ

Update: 2021-11-19 14:57 GMT

ಶ್ರೀನಗರ, ನ. 19: ಇಬ್ಬರು ನಾಗರಿಕರು ಸಾವನ್ನಪ್ಪಿದ ಶ್ರೀನಗರದ ಹೈದರ್‌ಪೋರಾದಲ್ಲಿ ನಡೆದ ಎನ್‌ಕೌಂಟರ್ ಕುರಿತು ಸಮಯ ಮಿತಿಯಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ಜಮ್ಮು ಹಾಗೂ ಕಾಶ್ಮೀರದ ಗುಪ್ಕರ್ ಮೈತ್ರಿಕೂಟ ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರಬರೆದಿದೆ. ತನಿಖೆಯಲ್ಲಿ ಕಂಡು ಬರುವ ಸತ್ಯವನ್ನು ಸಾರ್ವಜನಿಕರೆದುರು ಬಹಿರಂಗಗೊಳಿಸಬೇಕು ಎಂದು ಗುಪ್ಕರ್ ಮೈತ್ರಿ ಕೂಟ ಆಗ್ರಹಿಸಿದೆ. ಇಂತಹ ದುರಾದೃಷ್ಟಕರ ಘಟನೆಗಳು ಜಮ್ಮು ಕಾಶ್ಮೀರದ ಜನರು ಹಾಗೂ ಕೇಂದ್ರ ಸರಕಾರದ ನಡುವಿನ ಕಂದಕವನ್ನು ಹೆಚ್ಚಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದ ಗುಪ್ಕರ್ ಮೈತ್ರಿಕೂಟ ರಾಷ್ಟ್ರಪತಿ ಅವರಿಗೆ ಬರೆದೆ ಪತ್ರದಲ್ಲಿ ಹೇಳಿದೆ.

ಶ್ರೀನಗರದ ಹೈದರ್‌ಪೋರಾದ ವಾಣಿಜ್ಯ ಸಂಕೀರ್ಣದಲ್ಲಿ ಸೋಮವಾರ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಹಾರ್ಡ್‌ವೇರ್ ಅಂಗಡಿಯ ಮಾಲಕ ಮುಹಮ್ಮದ್ ಅಲ್ತಾಫ್ ಭಟ್ ಹಾಗೂ ಉದ್ಯಮಿಯಾಗಿ ಪರಿವರ್ತನೆಯಾದ ದಂತವೈದ್ಯ ಡಾ. ಮುದಸ್ಸಿರ್ ಗುಲ್ ಮೃತಪಟ್ಟಿದ್ದರು. 

ಆರಂಭದಲ್ಲಿ ಪೊಲೀಸರು ಭಟ್ ಹಾಗೂ ಗುಲ್ ರನ್ನು ಶಂಕಿತ ಉಗ್ರರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪ್ರತಿಪಾದಿಸಿದ್ದರು. ಆದರೆ ಅನಂತರ, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಆದರೆ, ಭಟ್ ಅವರ ಸೊಸೆ ಪೊಲೀಸರು ಅವರನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿದ್ದರು. 

ಜಮ್ಮು ಹಾಗೂ ಕಾಶ್ಮೀರದ ಆಡಳಿತ ಗುರುವಾರ ಈ ಎನ್‌ಕೌಂಟರ್ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ನೀಡಿತು. ಈ ಗುಂಡಿನ ಚಕಮಕಿ ಕುರಿತು ಮಾಹಿತಿ ನೀಡುವಂತೆ ಜನರನ್ನು ಆಗ್ರಹಿಸಿ ಶ್ರೀನಗರದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಖುರ್ಷಿದ್ ಅಹ್ಮದ್ ಶಾ ಅವರು ನೋಟಿಸು ಜಾರಿ ಮಾಡಿದ್ದರು. ಹೈದರ್‌ಪೋರಾ ಎನ್‌ಕೌಂಟರ್ ಹಾಗೂ ಇಂತಹ ಇತರ ಹಲವು ಘಟನೆಗಳಲ್ಲಿ ಮೃತಪಟ್ಟವರ ಮೃದೇಹವನ್ನು ಸೂಕ್ತ ಸಮಯದಲ್ಲಿ ಅವರ ಕುಟುಂಬಕ್ಕೆ ಹಸ್ತಾಂತರಿಸುತ್ತಿಲ್ಲ. ಸಂಪ್ರದಾಯಕ್ಕೆ ಅನುಗುಣವಾಗಿ ಸೂಕ್ತ ರೀತಿಯಲ್ಲಿ ದಫನ ಮಾಡುವಲ್ಲಿ ಕುಟುಂಬದವರು ವಂಚಿತರಾಗುವಂತೆ ಮಾಡಲಾಗುತ್ತಿದೆ ಎಂದು ಗುಪ್ಕರ್ ಅಲೆಯನ್ಸ್ ಗುರುವಾರ ಗಮನ ಸೆಳೆದಿತ್ತು. ಭಾರತದ ಸಂವಿಧಾನ ಹಾಗೂ ಅಂತಾರಾಷ್ಟ್ರೀಯ ಮಾನವೀಯತೆಯ ಕಾನೂನಿನಲ್ಲಿ ಯೋಗ್ಯ ರೀತಿಯಲ್ಲಿ ದಫನ ಮಾಡುವ ಹಕ್ಕು ನೀಡಲಾಗಿದೆ. ಕಾನೂನು ಹಾಗೂ ಸುವ್ಯವಸ್ಥೆ ಸೇರಿದಂತೆ ಯಾವುದೇ ಸಂದರ್ಭಗಳಲ್ಲಿ ಮೃತದೇಹದ ದಫನದ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಗುಪ್ಕರ್ ಅಲಯನ್ಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News