ಬೆಂಗಳೂರು: ಅಪಾರ್ಟ್‍ಮೆಂಟ್‍ಗೆ ನೀರು; ನಿವಾಸಿಗಳು ಕಂಗಾಲು

Update: 2021-11-20 16:47 GMT

ಬೆಂಗಳೂರು, ನ.20: ನಿರಂತರವಾಗಿ ಮಳೆಯಾಗುತ್ತಿರುವ ಕಾರಣದಿಂದ ಯಲಹಂಕ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್‍ನಲ್ಲಿ ಮಳೆನೀರು ನುಗ್ಗಿ, ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ.

ಯಲಹಂಕದ ಕೋಗಿಲು ಕ್ರಾಸ್ ಬಳಿಯ ಕೇಂದ್ರೀಯ ವಿಹಾರದಲ್ಲಿ ಸುಮಾರು 8 ಬ್ಲಾಕ್‍ಗಳಿದ್ದು, ಒಟ್ಟು 603 ಫ್ಲಾಟ್‍ಗಳನ್ನು ಒಳಗೊಂಡಿರುವ ಅಪಾರ್ಟ್‍ಮೆಂಟ್‍ನಲ್ಲಿ ಬರೋಬ್ಬರಿ 3 ಸಾವಿರಕ್ಕೂ ಅಧಿಕ ನಿವಾಸಿಗಳು ವಾಸವಾಗಿದ್ದಾರೆ.

ಆದರೆ, ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ್ಟ್‍ಮೆಂಟ್ ಪಕ್ಕದಲ್ಲಿರುವ ಅಮ್ಮಾನಿ ಕೆರೆ ಭರ್ತಿಯಾಗಿ ಕೆರೆಯ ಕೋಡಿ ಒಡೆದುಹೋಗಿದೆ. ಇದರ ಪರಿಣಾಮ ಅಪಾರ್ಟ್‍ಮೆಂಟ್ ಬೇಸ್‍ಮೆಂಟ್ ಸಂಪೂರ್ಣ ಜಲಾವೃತಗೊಂಡಿದೆ.

ಅಪಾರ್ಟ್‍ಮೆಂಟಿನ ಬೇಸ್ಮೆಂಟ್‍ನಲ್ಲಿ ಕೆರೆಯ ನೀರು ನಿಂತಿದ್ದು, ಕೆರೆಯಂತೆ ಆಗಿದೆ. ಅಲ್ಲಿನ ನಿವಾಸಿಗಳು ಕಾರು, ಬೈಕ್‍ಗಳನ್ನು ಹೊರ ತರಲು ಯತ್ನಿಸುತ್ತಿದ್ದಾರೆ. ಆದರೆ, ಮಳೆ ಇದಕ್ಕೆ ಅಡ್ಡಿಯಾಗಿದೆ.

ಜತೆಗೆ, ಮಳೆ ಅವಾಂತರದಿಂದ ಯಾವುದೇ ಅವಘಡ ಸಂಭವಿಸದಂತೆ ಅಪಾರ್ಟ್‍ಮೆಂಟಿನಲ್ಲಿ ವಿದ್ಯುತ್ ಸೇವೆಯನ್ನು ಸ್ಥಗಿತ ಮಾಡಲಾಗಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News