ಕೋವಿಡ್ ಹೊಸ ನಿರ್ಬಂಧಗಳ ವಿರುದ್ಧ ಯುರೋಪ್, ಆಸ್ಟ್ರೇಲಿಯದಲ್ಲಿ ಪ್ರತಿಭಟನೆ

Update: 2021-11-21 17:43 GMT

ವಿಯೆನ್ನಾ, ನ.21: ಕೋವಿಡ್19 ಸೋಂಕಿನ ಹಾವಳಿ ಮತ್ತೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಹೊಸತಾಗಿ ನಿರ್ಬಂಧಗಳನ್ನು ಹೇರಿರುವುದನ್ನು ವಿರೋಧಿಸಿ ಯುರೋಪ್ ಹಾಗೂ ಆಸ್ಟ್ರೇಲಿಯಗಳಲ್ಲಿ ಶನಿವಾರ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ದೈನಂದಿನ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಯುರೋಪ್ ರಾಷ್ಟ್ರವಾದ ಆಸ್ಟ್ರಿಯಾ ಶನಿವಾರದಿಂದ ಭಾಗಶಃ ಲಾಕ್ಡೌನ್ ಹೇರಿದೆ. ಇತರ ದೇಶಗಳು ಕೂಡಾ ಕೋವಿಡ್19ನ ಹೊಸ ಅಲೆ ವಿರುದ್ಧ ಹೋರಾಡಲು ರೆಸ್ಟೋರೆಂಟ್‌ ಗಳು ಹಾಗೂ ಬಾರ್ ಮತ್ತಿತರ ಸಾರ್ವಜನಿಕ ಸ್ಥಳಗಳನ್ನು ಲಸಿಕೆ ಪಡೆಯದವರಿಗೆ ನಿಷೇಧಿಸಿರುವುದು ಸೇರಿದಂತೆ ಹಲವಾರು ನಿರ್ಬಂಧಗಳನ್ನು ಪ್ರಕಟಿಸಿದೆ.

ನೆದರ್ಲ್ಯಾಂಡ್ ನ ನಗರ ರೊಟೆರ್ಡಾಮ್ನಲ್ಲಿ ಕೋವಿಡ್ ನಿರ್ಬಂಧ ವಿರೋಧಿಸಿ ರ‍್ಯಾಲಿ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಹಾಗೂ 51 ಮಂದಿಯನ್ನು ಬಂಧಿಸಲಾಗಿದೆ. ನೆದರ್ಲ್ಯಾಂಡ್ ನ ಇನ್ನೊಂದು ನಗರವಾದ ಹೇಗ್ನಲ್ಲಿಯೂ ಪ್ರತಿಭಟನೆ ಭುಗಿಲೆದ್ದಿರುವುದಾಗಿ ವರದಿಯಾಗಿದೆ. ರಾಜಧಾನಿ ಆ್ಯಮ್ಸ್ಟರ್ ಡ್ಯಾಮ್ನಲ್ಲಿಯೂ ಕೋವಿಡ್ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು, ಇದರಿಂದ ಉದ್ರಿಕ್ತರಾದ ಸಾವಿರಾರು ಮಂದಿ ಶನಿವಾರ ನಗರದ ಹೃದಯ ಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಆಸ್ಟ್ರಿಯ ರಾಜಧಾನಿ ವಿಯೆನ್ನಾದಲ್ಲಿ ಬಲಪಂಥೀಯ ಗುಂಪುಗಳ ಬೆಂಬಲಿಗರು ಸೇರಿದಂತೆ 35 ಸಾವಿರಕ್ಕೂ ಅಧಿಕ ಮಂದಿ ಕೋವಿಡ್19 ನಿರ್ಬಂಧಗಳ ವಿರುದ್ಧ ಬೃಹತ್ ರ‍್ಯಾಲಿ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ 1300ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನಕಾರರಲ್ಲಿ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಅದೇ ರೀತಿ ಉತ್ತರ ಐರ್ಲೆಂಡ್‌ ನಲ್ಲಿ ನೈಟ್ ಕ್ಲಬ್ ಗಳು, ಬಾರ್ ಗಳು ಹಾಗೂ ರೆಸ್ಟಾರೆಂಟ್ಗಳನ್ನು ಪ್ರವೇಶಿಸಲು ಲಸಿಕಾ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಬೆಲ್ಫಾಸ್ಟ್ ನಗರದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದರು.
ಕ್ರೊಯೇಶಿಯಾ, ಇಟಲಿ, ಡೆನ್ಮಾರ್ಕ್ನ ವಿವಿಧ ನಗರಗಳಲಿ ನೂತನ ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಭಾರೀ ಪ್ರತಿಭಟನೆಗಳು ನಡೆದಿರುವುದಾಗಿ ವರದಿಯಾಗಿದೆ.

ಯುರೋಪ್ನ ವಿವಿಧ ದೇಶಗಳು ಮಾತ್ರವಲ್ಲದೆ ಅಸ್ಟೇಲಿಯದಲ್ಲಿಯೂ ಕೋವಿಡ್19 ನಿರ್ಬಂಧಗಳ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಕೆಲವು ಉದ್ಯೋಗಗಳಿಗೆ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸುವ ಸರಕಾರದ ನಿರ್ಧಾರ ವಿರೋಧಿಸಿ ಸಿಡ್ನಿಯಲ್ಲಿ 10 ಸಾವಿರ ಮಂದಿ ಬೃಹತ್ ರ್ಯಾಲಿ ನಡೆಸಿದರು.

► ಮಿಂಚಿನ ವೇಗದಲ್ಲಿ ಕೋವಿಡ್ 5ನೇ ಅಲೆ ಹರಡುತ್ತಿದೆ: ಫ್ರಾನ್ಸ್ ಕಳವಳ

ಫ್ರಾನ್ಸ್ನಲ್ಲಿ ಕೊರೋನ ವೈರಸ್ ಸೋಂಕಿನ ಐದನೆ ಅಲೆಯು ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆಯೆಂದು ಸರಕಾರವು ರವಿವಾರ ತಿಳಿಸಿದೆ. ಈ ವಾರ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ವಾರಕ್ಕಿಂತ ಎರಡು ಪಟ್ಟು ಹೆಚ್ಚಳವಾಗಿರುವುದು ಕಂಡುಬಂದಿದೆಯೆಂದು ಅದು ಹೇಳಿದೆ.

ಏಳು ದಿನಗಳ ಸರಾಸರಿ ಕೊರೋನ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆಯು ಶನಿವಾರ 17,153ಕ್ಕೆ ತಲುಪಿದ್ದು, ಹಿಂದಿನ ವಾರ ಅದು 9458 ಆಗಿದೆ ಎಂದು ಫ್ರಾನ್ಸ್ನ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಸೋಂಕಿನ ಪ್ರಕರಣಗಳಲ್ಲಿ ಶೇ.81ರಷ್ಟು ಹೆಚ್ಚಳವಾದಂತಾಗಿದೆ ಎಂದವರು ತಿಳಿಸಿದ್ದಾರೆ.
ಕೋವಿಡ್ ಐದನೇ ಅಲೆಯು ಮಿಂಚಿನ ವೇಗದಲ್ಲಿ ಆರಂಭಗೊಂಡಿದೆ ಎಂದು ಫ್ರೆಂಚ್ ಸರಕಾರದ ವಕ್ತಾರ ಗೇಬ್ರಿಯಲ್ ಅಟ್ಟಾಲ್ ತಿಳಿಸಿದ್ದಾರೆ.
ಶನಿವಾರ ಫ್ರಾನ್ಸ್ನ ವಿವಿಧ ಆಸ್ಪತ್ರೆಗಳಲ್ಲಿ 7974 ಕೋವಿಡ್ ಸೋಂಕಿತರು ದಾಖಲಾಗಿದ್ದು ಅವರಲ್ಲಿ 1333 ಮಂದಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News