ನಾಪತ್ತೆಯಾಗಿದ್ದರೆನ್ನಲಾದ ಚೀನಾದ ಟೆನಿಸ್ ತಾರೆ ಪೆಂಗ್ ಶುವಾಯ್ ಐಒಸಿ ಅಧ್ಯಕ್ಷರೊಂದಿಗೆ ವೀಡಿಯೊ ಕರೆ ಮೂಲಕ ಮಾತುಕತೆ

Update: 2021-11-22 06:15 GMT

 ಬೀಜಿಂಗ್: ಈ ತಿಂಗಳ ಆರಂಭದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದರೆನ್ನಲಾದ ಚೀನಾದ ಟೆನಿಸ್ ತಾರೆ ಪೆಂಗ್ ಶುವಾಯ್ ಅವರು ರವಿವಾರದಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್  ಸಮಿತಿಯ(ಐಒಸಿ) ಮುಖ್ಯಸ್ಥರೊಂದಿಗೆ ಮಾಡಿರುವ ವೀಡಿಯೊ ಕರೆಯಲ್ಲಿ ತಾನು ಸುರಕ್ಷಿತವಾಗಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆ  ಎಂದು ಹೇಳಿದ್ದಾರೆಂದು ವರದಿಯಾಗಿದೆ.

ಚೀನಾದ ಮಾಜಿ ಉಪ ಪ್ರಧಾನಿ ಝಾಂಗ್ ಗವೋಲಿ ತನ್ನ ಮೇಲೆ  ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ 35 ವರ್ಷ ವಯಸ್ಸಿನ ಎರಡು ಬಾರಿ ಗ್ರ್ಯಾನ್  ಸ್ಲಾಮ್ ಡಬಲ್ಸ್ ಚಾಂಪಿಯನ್ ಶುವಾಯ್ ಸ್ಫೋಟಕ ಹೇಳಿಕೆ ನೀಡಿದ ನಂತರ ಅವರ ಯೋಗಕ್ಷೇಮದ ಬಗ್ಗೆ ಅಂತರರಾಷ್ಟ್ರೀಯ ಟೆನಿಸ್ ಆಟಗಾರರು  ಕಳವಳ ವ್ಯಕ್ತಪಡಿಸಿದ್ದರು.  ಚೀನಾ ಸರಕಾರವನ್ನು ಪ್ರಶ್ನಿಸಿದ್ದರು.

ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರೊಂದಿಗಿನ 30 ನಿಮಿಷಗಳ ಕರೆಯ ಆರಂಭದಲ್ಲಿ ಪೆಂಗ್ ಶುವಾಯ್ ತನ್ನ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಐಒಸಿಗೆ ಧನ್ಯವಾದ ಅರ್ಪಿಸಿದರು ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

 "ಶುವಾಯ್ ಅವರು ಸುರಕ್ಷಿತವಾಗಿ ಹಾಗೂ  ಚೆನ್ನಾಗಿರುವುದಾಗಿ ವಿವರಿಸಿದರು. ಬೀಜಿಂಗ್‌ನಲ್ಲಿರುವ ಅವರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ಸಮಯದಲ್ಲಿ ನಾವು ಅವರ ಗೌಪ್ಯತೆಯನ್ನು ಗೌರವಿಸಲು ಬಯಸುತ್ತೇವೆ" ಎಂದು ಸಂಸ್ಥೆ ಹೇಳಿದೆ.

ಅದಕ್ಕಾಗಿಯೇ ಅವರು ಇದೀಗ ಸ್ನೇಹಿತರು ಮತ್ತು ಕುಟುಂಬದೊಂದಿಗೆ ತನ್ನ ಸಮಯವನ್ನು ಕಳೆಯಲು ಆದ್ಯತೆ ನೀಡುತ್ತಿದ್ದಾರೆ. ಅದೇನೇ ಇದ್ದರೂ, ಅವರು  ತುಂಬಾ ಪ್ರೀತಿಸುವ ಕ್ರೀಡೆಯಾದ ಟೆನಿಸ್‌ನಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತಾರೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News