ಒಂದು ವರ್ಷದ ಮಗುವಿನ ದತ್ತು ವಿವಾದ: ಆಂಧ್ರ ಪ್ರದೇಶದಿಂದ ಮಗುವನ್ನು ವಾಪಸ್ ತಂದ ಕೇರಳ ಅಧಿಕಾರಿಗಳು

Update: 2021-11-22 07:50 GMT
ಸಾಂದರ್ಭಿಕ ಚಿತ್ರ (PTI)

ತಿರುವನಂತಪುರಂ: ದತ್ತು ವಿವಾದವೊಂದರಲ್ಲಿ ಸಿಲುಕಿದ್ದ ಒಂದು ವರ್ಷದ ಮಗುವನ್ನು ಆಂಧ್ರ ಪ್ರದೇಶದಿಂದ ಕೇರಳಕ್ಕೆ ರವಿವಾರ ರಾತ್ರಿ  ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ ಅಧಿಕಾರಿಗಳು ಕರೆತಂದಿದ್ದಾರೆ.

ಆಂಧ್ರಪ್ರದೇಶದಲ್ಲಿ ದಂಪತಿಯೊಂದು ದತ್ತು ಪಡೆದು ಆರೈಕೆ ಮಾಡುತ್ತಿದ್ದ ಒಂದು ವರ್ಷದ ಮಗು ಕೇರಳದ ಅನುಪಮಾ ಎಸ್ ಚಂದ್ರನ್ ಅವರ ಮಗುವಾಗಿದೆ ಎಂದು  ಶಂಕಿಸಲಾಗಿದೆ. ತಾನು ಮಗುವಿಗೆ ಜನ್ಮ ನೀಡಿದ ಕೂಡಲೇ ಅದನ್ನು ತನ್ನ ಹೆತ್ತವರು ಅಪಹರಿಸಿ ತನ್ನ ಅನುಮತಿಯಿಲ್ಲದೆ ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ ಮೂಲಕ ದತ್ತು ನೀಡಿದ್ದರು ಎಂದು ಅನುಪಮಾ ಆರೋಪಿಸಿದ್ದಾರೆ.

ಮಗುವನ್ನು ಕೇರಳಕ್ಕೆ ವಾಪಸ್ ತರುವಂತೆ ಮಕ್ಕಳ ಕಲ್ಯಾಣ ಸಮಿತಿಯು  ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಗೆ ನವೆಂಬರ್ 18ರಂದು ಸೂಚಿಸಿತ್ತು. ಅಂತೆಯೇ ಮಂಡಳಿಯ ಅಧಿಕಾರಿಗಳ ತಂಡವು ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಯೊಬ್ಬರೊಡಗೂಡಿ ಆಂಧ್ರ ಪ್ರದೇಶದಲ್ಲಿ ಆ ಮಗುವನ್ನು ದತ್ತು ಪಡೆದಿದ್ದ ದಂಪತಿಯಿಂದ ವಾಪಸ್ ಪಡೆದು ಕೇರಳಕ್ಕೆ ತಂದಿದೆ. ರವಿವಾರ ರಾತ್ರಿ ತಂಡ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು ಮಗು ಈಗ  ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಂತೆ ಮಕ್ಕಳ ಆರೈಕೆ ಕೇಂದ್ರವೊಂದರಲ್ಲಿದೆ.

ಮಗುವಿನ ತಂದೆತಾಯಿಯನ್ನು ಗುರುತಿಸುವಂತಾಗಲು ಡಿಎನ್‌ಎ ಪರೀಕ್ಷೆಯನ್ನು ಮಕ್ಕಳ ಕಲ್ಯಾಣ ಸಮಿತಿಯ ಸೂಚನೆಯಂತೆ ನಡೆಸಲಾಗುವುದು. ಮಗುವನ್ನು ವಾಪಸ್ ನೀಡಬೇಕೆಂದು ಆಗ್ರಹಿಸಿ ಮಗುವಿನ ಹೆತ್ತ ತಾಯಿಯೆಂದು ತಿಳಿಯಲಾದ ಅನುಪಮಾ (24) ಮತ್ತಾಕೆಯ ಸಂಗಾತಿ ಅಜಿತ್  ತೈಕೌಡ್ ಎಂಬಲ್ಲಿರುವ ಮಕ್ಕಳ ಕಲ್ಯಾಣ ಮಂಡಳಿಯ ಕಚೇರಿಯೆದುರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವತಿಯ ತಂದೆ ಸಿಪಿಐಎಂ ನಾಯಕರಾಗಿರುವುದರಿಂದ ಈ ವಿಚಾರ ಇದೀಗ ರಾಜಕೀಯ ವಿವಾದಕ್ಕೂ ನಾಂದಿ ಹಾಡಿದೆಯಲ್ಲದೆ ಸರಕಾರ ಘಟನೆಯ ಇಲಾಖಾ ತನಿಖೆಗೂ ಸೂಚಿಸಿದೆ.

ತನ್ನ ಹೆತ್ತವರು ತನ್ನ ಮಗುವನ್ನು ಅಪಹರಿಸಿದ್ದಾರೆಂದು ಹಲವು ಬಾರಿ ಪೊಲಿಸ್ ದೂರನ್ನು ಎಪ್ರಿಲ್ ನಿಂದೀಚೆಗೆ ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಲು ಹಿಂಜರಿಕೆ ತೋರಿದ್ದಾರೆಂದು ಅನುಪಮಾ ಆರೋಪಿಸಿದ್ದಾರೆ.

ಆದರೆ ಅನುಪಮಾಳ ಹೆತ್ತವರು, ಸಹೋದರಿ, ಆಕೆಯ ಪತಿ ಹಾಗೂ ಆಕೆಯ ತಂದೆಯ ಇಬ್ಬರು ಸ್ನೇಹಿತರು- ಹೀಗೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಆದರೆ ಕಾನೂನು ಸಲಹೆಗಾಗಿ ಕಾದಿರುವುದರಿಂದ ಕ್ರಮಕೈಗೊಳ್ಳಲು ವಿಳಂಬವಾಗಿದೆ ಎಂದು ಪೆರೂರಕ್ಕಡ ಪೊಲೀಸರು ಹೇಳಿದ್ದಾರೆ.

ಕಳೆದ ತಿಂಗಳು ಕುಟುಂಬ ನ್ಯಾಯಾಲಯವೊಂದು ದತ್ತು ಪ್ರಕ್ರಿಯೆಗೆ ತಡೆ ಹೇರಿತ್ತಲ್ಲದೆ  ಪ್ರಕರಣದ ವಿವರಗಳನ್ನು ಸೀಲ್ ಮಾಡಲ್ಪಟ್ಟ ಕವರಿನಲ್ಲಿ ನೀಡಬೇಕೆಂದೂ ಪೊಲೀಸರಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News