ಜಾರಕಿಹೊಳಿ ಸೀಡಿ ಪ್ರಕರಣ: ತನಿಖೆಯ ಆದೇಶ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಪಂತ್

Update: 2021-11-24 17:13 GMT

ಬೆಂಗಳೂರು, ನ.24: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನಾಧರಿಸಿ ಎಫ್‍ಐಆರ್ ದಾಖಲಿಸದ ಸಂಬಂಧ ತನಿಖೆ ನಡೆಸಲು ನಗರದ 8ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಮೂವರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ತನಿಖೆಯ ಆದೇಶವನ್ನು ರದ್ದುಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.   

ಖಾಸಗಿ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ನಗರ ಪೊಲೀಸ್ ಆಯುಕ್ತ  ಕಮಲ್ ಪಂತ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ಇನ್ಸ್‍ಪೆಕ್ಟರ್ ಮಾರುತಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ಕರ್ತವ್ಯಲೋಪ ಎಸಗಿಲ್ಲ. ಅಲ್ಲದೆ, ದೂರುದಾರರು ಸಂತ್ರಸ್ಥೆಗೆ ಸಂಬಂಧಿಸಿದ ವಿವರಗಳನ್ನು ಆರಂಭದಲ್ಲಿ ಒದಗಿಸಿರಲಿಲ್ಲ. ಪ್ರಕರಣದಲ್ಲಿ ಆರೋಪಿತ ಮಾಜಿ ಸಚಿವರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ಖಾಸಗಿ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ತಮ್ಮ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿರುವ ಆದೇಶ ರದ್ದು ಮಾಡಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ. 

ಇನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಆದರ್ಶ ಅಯ್ಯರ್, ಪ್ರಜಾಪ್ರಭುತ್ವದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಕರ್ತವ್ಯ ಲೋಪ ಎಸಗಿದ್ದ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸಿದ್ದೆ. ಇದೀಗ, ನ್ಯಾಯಾಲಯ ತನಿಖೆಗೆ ಆದೇಶಿಸಿರುವುದು ಸಮಾದಾನ ತಂದಿದೆ ಎಂದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News