×
Ad

ಜನವರಿಗೆ 30 ಕಿ.ಮೀ ರಾಜಕಾಲುವೆ ಕಾಮಗಾರಿ ಪೂರ್ಣಕ್ಕೆ ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-11-24 22:50 IST

ಬೆಂಗಳೂರು, ನ. 24: ‘ಎಪ್ಪತ್ತೈದು ಕಿ.ಮೀ ರಾಜಕಾಲುವೆ ಫೈಕಿ ಈಗಾಗಲೇ 40 ಕಿ.ಮೀ ಪೂರ್ಣಗೊಂಡಿದ್ದು, ಉಳಿದ 30 ಕಿ.ಮೀ ರಾಜಕಾಲುವೆ ಕಾಮಗಾರಿ ಜನವರಿ ಅಂತ್ಯಕ್ಕೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರಾಜಕಾಲುವೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಬೆಂಗಳೂರು ನಗರದಲ್ಲಿ ಅತಿಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿದೆ. ಕೆರೆ ಕೆಳಗೆ ಇರುವ ರಾಜಕಾಲುವೆಗಳನ್ನು ದುರಸ್ತಿ ಮಾಡಿ, ಅದರ ನೀರಿನ ಸಾಗಣೆ ಸಾಮಥ್ರ್ಯವನ್ನು ಹೆಚ್ಚಿಸಬೇಕು ಎನ್ನುವ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ' ಎಂದರು.

‘ನಗರದೊಳಗಿನ ರಾಜಕಾಲುವೆಗಳ ಕಲ್ಲಿನ ತಡೆಗೋಡೆಯನ್ನು ಆರ್‍ಸಿಸಿ ತಡೆಗೋಡೆಯನ್ನಾಗಿ ಪರಿವರ್ತಿಸಬೇಕು. ನಗರದ ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಕಾಲುವೆಗಳಿವೆ. ಹೊಸದಾಗಿ ಸೇರ್ಪಡೆಯಾದ 110 ಗ್ರಾಮಗಳಲ್ಲಿ ಆರ್‍ಸಿಸಿ ಕಾಲುವೆಗಳನ್ನು ನಿರ್ಮಿಸಿ, ಅವುಗಳ ಅಗಲವನ್ನು ವಿಸ್ತರಿಸಬೇಕು. ಅಲ್ಲಲ್ಲಿ ಇರುವ ಅಡಚಣೆಗಳನ್ನು ತೆರವುಗೊಳಿಸಲು ವಿಶೇಷ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

‘ಪ್ರತಿಯೊಬ್ಬ ಕಾರ್ಯನಿರ್ವಾಹಕ ಅಭಿಯಂತರರು ಅವರವರ ವ್ಯಾಪ್ತಿಗೆ ಬರುವ ವಿಚಾರಗಳಿಂದ ಮಾಹಿತಿ ಪಡೆದುಕೊಂಡು, ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದೆ. ವೃಷಭಾವತಿ, ಹೆಬ್ಬಾಳ, ಚಲ್ಲಘಟ್ಟ ಮತ್ತು ಕೋರಮಂಗಲ ನಗರದ ನಾಲ್ಕು ವ್ಯಾಲಿಗಳಿಗೆ 842 ಕಿಲೋಮೀಟರ್ ರಾಜಕಾಲುವೆ ಇವೆ. ಈ ಪೈಕಿ 415 ಕಿ.ಮೀ ಈಗಾಗಲೇ ಪೂರ್ಣಗೊಂಡಿದೆ. 2019-20ರಲ್ಲಿ 75 ಕಿ.ಮೀ ರಾಜಕಾಲುವೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಅದರಲ್ಲಿ 40 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಹಲವು ಗಂಭೀರ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು 94 ಗಂಭೀರ ಸ್ಥಳಗಳಿವೆ. ಅವುಗಳ ವಿವರಗಳನ್ನು ಪಡೆದಿದ್ದೇನೆ. ಅವುಗಳನ್ನು ಇನ್ನು 2 ತಿಂಗೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದರು.

‘ಚಲ್ಲಘಟ್ಟ ಮತ್ತು ವೃಷಭಾವತಿಯಲ್ಲಿಯೂ ಇಂತಹ ಗಂಭೀರ ಸ್ಥಳಗಳಿವೆ ಎಂಬ ಮಾಹಿತಿಯನ್ನು ಪಡೆದಿದ್ದೇನೆ. ಸುಮಾರು 51 ಕಿ.ಮೀ  ಪ್ರಾಥಮಿಕ ಬೃಹತ್ ನೀರುಗಾಲುವೆಗಳು ಕೂಡಲೇ ಆಗಬೇಕಿವೆ. ಉಳಿದ 38 ಕಿ.ಮೀ ದ್ವಿತೀಯ ಚರಂಡಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸುಮಾರು 900 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಚರಂಡಿಗಳ ನಿರ್ಮಾಣಕ್ಕೆ ಡಿ.ಪಿ.ಆರ್. ಸಿದ್ಧಪಡಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದು, ಕೂಡಲೇ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ನಿಗದಿತ ಸಮಯದೊಳಗೆ ಪೂರ್ಣಗೊಂಡು ಜನರಿಗೆ ತೊಂದರೆಯಾಗಬಾರದು ಎನ್ನುವ ಸೂಚನೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

‘ಹಲವು ಬಡಾವಣೆಗಳಲ್ಲಿ ಯುಜಿಡಿ ಲೈನ್ ಪೂರ್ಣಗೊಳ್ಳಬೇಕಿದ್ದು ಅದನ್ನು ಪೂರ್ಣಗೊಳಿಸುವಂತೆ ಬಿಡಬ್ಲ್ಯೂಎಸ್‍ಎಸ್‍ಬಿ ಅಧ್ಯಕ್ಷರಿಗೆ ಸೂಚಿಸಲಾಗಿದೆ. ಶಾಶ್ವತ ಪರಿಹಾರ ನೀಡಬೇಕೆಂಬ ಉದ್ದೇಶದಿಂದ  ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದಲ್ಲದೆ, ಬಡಾವಣೆ-ಓಣಿಯಲ್ಲಿರುವ ಒಳಚರಂಡಿಗಳಲ್ಲಿ ಹೂಳು ತೆಗೆಯಲು ಬಿಬಿಎಂಪಿಗೆ ಸೂಚನೆ ನೀಡಿದೆ ಹಾಗೂ ಪ್ರಾಥಮಿಕ ಚರಂಡಿಗಳಲ್ಲಿಯೂ ಹೂಳು ತೆಗೆಯಲು ಸೂಚಿಸಲಾಗಿದೆ.

ಒಟ್ಟು ನಾಲ್ಕು ವ್ಯಾಲಿಗಳಲ್ಲಿ ಉಳಿದಿರುವ ಕೆಲಸಗಳ ಬಗ್ಗೆ ಇಂದಿನ ಸ್ಥಿತಿಗತಿಗಳನ್ನು ಆಧರಿಸಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲು ಸೂಚಿಸಿದ್ದು, ಜಟಿಲವಾದ ಸವಾಲಿನಲ್ಲಿ ಶಾಶ್ವತ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದು, ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಶವನ್ನು ಬಿಬಿಎಂಪಿಗೆ ತಿಳಿಸಲು ಇಲ್ಲಿಯೇ ಸಭೆ ನಡೆಸಿದ್ದೇನೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರದ ಸಚಿವರೂ ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅನುಭವಗಳ ಆಧಾರದ ಮೇಲೆ ಕೆಲವು ಆದೇಶಗಳನ್ನು ನೀಡಿದ್ದಾರೆ. ಶಾಶ್ವತ ಪರಿಹಾರ ನೀಡುವ ದಿಕ್ಕಿನಲ್ಲಿ ಪ್ರಥಮ ಬಾರಿಗೆ ಕೆಲಸಗಳು ಪ್ರಾರಂಭವಾಗಿವೆ ಎಂದ ಅವರು, ಮಳೆ ನೀರು ಸುಗಮವಾಗಿ ಹರಿದು ಹೋಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. 

ಒತ್ತುವರಿ ತೆರವು: ರಾಜಕಾಲುವೆ ವ್ಯಾಪ್ತಿಯಲ್ಲಿನ ಒಟ್ಟು 2,626 ಒತ್ತುವರಿಯಾಗಿರುವ ಪ್ರದೇಶಗಳನ್ನು ಗುರುತಿಸಿದ್ದು, ಆ ಪೈಕಿ 1,480 ತೆರವುಗೊಳಿಸಿದ್ದು, ಉಳಿದ 714 ಪ್ರದೇಶಗಳಲ್ಲಿಯೂ ತೆರವುಗೊಳಿಸಲು ಕಾನೂನಾತ್ಮಕವಾಗಿ ಕ್ರಮ ಜರುಗಿಸುತ್ತೇವೆ. ಆದರೆ, ಬಡವರಿಗೆ ಯಾವುದೇ ತೊಂದರೆ ಕೊಡಬೇಡಿ ಅವರಿಗೆ ಸ್ಥಳಾಂತರಕ್ಕೆ ಸಮಯ ನೀಡುವಂತೆ ಸೂಚಿಸಲಾಗಿದೆ. ದೊಡ್ಡ ಬಿಲ್ಡರ್‍ಗಳು ಒತ್ತುವರಿ ಮಾಡಿದ್ದರೆ ಕೂಡಲೇ ಅದನ್ನು ತೆರವುಗೊಳಿಸಲು ಸ್ಪಷ್ಟ ಆದೇಶ ನೀಡಲಾಗಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಇಂಜಿಯರ್ ಗಳ ನೇಮಕಾತಿ: ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸಲು ಒಟ್ಟು 190 ಇಂಜಿನಿಯರ್‍ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಕೊಳ್ಳಲು ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ನಗರದಲ್ಲಿನ ಅಭಿವೃದ್ದಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಸಭೆಗೆ ಹಾಜರಾಗಿಲ್ಲ. ಅವರು ಪೂರ್ವನಿಗದಿತ ಕಾರ್ಯಕ್ರಮಗಳಂತೆ ಪ್ರವಾಹ ಉಂಟಾಗಿರುವ ಹಾಸನ ಮತ್ತಿತರೆಡೆ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಸ್ಪಷ್ಟಣೆ ನೀಡಿದ ಅವರು, ಮಳೆ ನಿಂತ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಸೂಚಿಸಿದ್ದು, ಒಂದು ಅಡಿಗಿಂತ ಕೆಳಗಿರುವುದಕ್ಕೆ ಪ್ರಥಮ ಆದ್ಯತೆ ನೀಡಲು ತಿಳಿಸಿದ್ದು, ಅರ್ಧ ಕಿ.ಮೀ ಗಿಂತ ಹೆಚ್ಚು ಹಾಳಾಗಿರುವ ರಸ್ತೆಗಳಿಗೆ ಡಾಂಬರು ಹಾಕಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ಪ್ರಾಥಮಿಕ ಮಳೆ ನೀರು ಚರಂಡಿ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು. ರಸ್ತೆಗಳಲ್ಲಿ ಹಾಗೂ ಮನೆಗಳಿಗೆ ನೀರು ನುಗ್ಗದಂತೆ ತುರ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು. ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಅಡಿಯಲ್ಲಿ ವಿಳಂಬ ಮಾಡದೆ ಕಾಮಗಾರಿ ಕೈಗೊಳ್ಳುವುದು ಹಾಗೂ ಅಗತ್ಯವಿದ್ದಲ್ಲಿ ಇತರೆ ಪ್ರಾಧಿಕಾರದ ಜತೆ ಗೆ ಮಾತನಾಡಿ ಕಾಮಗಾರಿಯನ್ನು ಜನವರಿಯೊಳಗೆ ಪ್ರಾರಂಭಿಸಬೇಕು.

ಪ್ರತಿ 15 ದಿನಗಳಿಗೊಮ್ಮೆ ಪ್ರಾಥಮಿಕ ಚರಂಡಿಗಳ ಕಾಮಗಾರಿಗಳನ್ನು ಸಿಎಂ ಡ್ಯಾಶ್ ಬೋರ್ಡ್‍ನಲ್ಲಿ ಖುದ್ದು ಪರಿಶೀಲಿಸುವುದು. ಕಾಮಗಾರಿ ಪ್ರಗತಿ ಬಗ್ಗೆ ಇಂಜಿನಿಯರುಗಳಿಗೆ ಖುದ್ದು ಕರೆ ಮಾಡಿ ವಿಚಾರಿಸುವುದಾಗಿ ತಿಳಿಸಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಒತ್ತುವರಿ ಆಗಿರುವಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

ಇಂದಿನ ವಸ್ತುಸ್ಥಿತಿಯ ಆಧಾರದ ಮೇಲೆ ಸಮಗ್ರವಾದ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿದ ನಂತರ ಕಾಮಗಾರಿ ಕೈಗೊಳ್ಳಲು ಅನುಮೋದನೆಯನ್ನು ತಕ್ಷಣವೇ ನೀಡಲಾಗುವುದು.

ಒಂದೂವರೆ ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ನಗರದ ಮುಖ್ಯ ಚರಂಡಿಗಳ ದುರ್ಬಲ ಸ್ಥಳಗಳನ್ನು ಗುರುತಿಸಿ, ಕಲ್ಲು ಕಟ್ಟಡಗಳನ್ನು ಆರ್‍ಸಿಸಿಯನ್ನಾಗಿ ಪರಿವರ್ತಿಸಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಇಂಜಿನಿಯರುಗಳಿಗೆ ಕೆಲಸವನ್ನು ಮರುಹಂಚಿಕೆ ಮಾಡಲಾಗುವುದು. ಕಾಮಗಾರಿಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು 197 ಕ್ಷೇತ್ರ ಇಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಅನುಮೋದನೆ ನೀಡಲಾಗಿದೆ. ಮಳೆ ನೀರು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು. ಸಂಸ್ಕರಿಸದ ನೀರನ್ನು ಮಳೆ ನೀರು ಚರಂಡಿಗೆ ಕಡ್ಡಾಯವಾಗಿ ಹರಿಸಬಾರದು. ಅದಕ್ಕಾಗಿ ಎಸ್‍ಟಿಪಿಗಳನ್ನು ಸರಿಪಡಿಸುವುದು. ಬಿಡಿಎ ಬಡಾವಣೆಗಳಲ್ಲಿ ವಿದ್ಯುಚ್ಚಕ್ತಿ, ಚರಂಡಿ ಹಾಗೂ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಅವರು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News