ಚೇತನ್ ಅಹಿಂಸಾ ವಿರುದ್ಧ ಬಸವನಗುಡಿ ಠಾಣೆಯೆದುರು ಬಜರಂಗ ದಳ ಪ್ರತಿಭಟನೆ

Update: 2021-11-25 07:55 GMT
File Photo (Photo credit: twitter@ChetanAhimsa
 

ಬೆಂಗಳೂರು, ನ.25: ದಲಿತರ ಕೇರಿಗಳಿಗೆ ಪೇಜಾವರ ಶ್ರೀಗಳ ಭೇಟಿ ಕುರಿತು ಹೇಳಿಕೆ ಸಂಬಂಧ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರಿಂದು ವಿಚಾರಣೆಗಾಗಿ ನಗರದ ಬಸವನಗುಡಿ ಠಾಣೆಗೆ ಹಾಜರಾಗಲಿದ್ದಾರೆ. ಈ ನಡುವೆ ಹಂಸಲೇಖರಿಗೆ ಬೆಂಬಲಾರ್ಥವಾಗಿ ಅವರೊಂದಿಗೆ ತಾನು ಕೂಡಾ ಠಾಣೆಗೆ ಹಾಜರಾಗುವುದಾಗಿ ಹೇಳಿದ್ದ ನಟ ಚೇತನ್ ಅಹಿಂಸಾ ವಿರುದ್ಧ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಂಸಲೇಖರಿಗೆ ಬೆಂಬಲ ಸೂಚಿಸಿದ್ದ ನಟ ಚೇತನ್ ಅಹಿಂಸಾ ಅವರು, "ಇಂದು ಠಾಣೆಗೆ ಹಾಜರಾಗಲಿರುವ ಹಂಸಲೇಖ ಜೊತೆಗೆ ತಾನೂ ಇರುತ್ತೇನೆ. ವಾಕ್ಸ್ವಾಂತಂತ್ರ್ಯದ ರಕ್ಷಕರು ಹಾಗೂ ನಾನು ಹಂಸಲೇಖರ ಜೊತೆಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ" ಎಂದು ಟ್ವೀಟ್ ಮಾಡಿದ್ದರು. ಇದನ್ನು ಆಕ್ಷೇಪಿಸಿ ಬಜರಂಗದಳದ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

"ಹಂಸಲೇಖ ಠಾಣೆಗೆ ಆಗಮಿಸುವ ವೇಳೆ ಚೇತನ್ ಅಹಿಂಸಾ ಏಕೆ ಬರಬೇಕು? ತಮ್ಮ ಹೇಳಿಕೆಗೆ ಸಂಬಂಧಿಸಿ ಕ್ಷಮೆ ಕೇಳಿರುವಾಗ ಚೇತನ್ ಏಕೆ ಅವರ ಹೇಳಿಕೆಯನ್ನು ಬೆಂಬಲಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಚೇತನ್ ಠಾಣೆಗೆ ಹಾಜರಾಗಲು ಬಿಡುವುದಿಲ್ಲ. ಬಸವನಗುಡಿ ಠಾಣೆಗೆ ಬಂದರೆ ಚೇತನ್ ವಿರುದ್ಧ ಘೋಷಣೆಗಳನ್ನು ಕೂಗುತ್ತೇವೆ" ಎಂದು ಎಚ್ಚರಿಸಿದ್ದಾರೆ.

ಈ ನಡುವೆ ಹಂಸಲೇಖರ ಬೆಂಬಲವಾಗಿ ಕೆಲವು ಸಂಘಟನೆಗಳ ಕಾರ್ಯಕರ್ತರು ಠಾಣೆಯ ಇನ್ನೊಂದು ಭಾಗದಲ್ಲಿ ಜಮಾಯಿಸಿ ಪರ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News