ಆಸ್ತಿಗಳಿಗೆ ಗುರುತಿನ ಸಂಖ್ಯೆ ನೀಡಿ: ಬಿಬಿಎಂಪಿಗೆ ಹೈಕೋರ್ಟ್ ಆದೇಶ

Update: 2021-11-25 11:58 GMT

ಬೆಂಗಳೂರು, ನ.25: ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿನ ಪ್ರತಿ ಆಸ್ತಿಗೂ ಆಸ್ತಿ ಗುರುತಿನ ಸಂಖ್ಯೆ(ಪ್ರಾಪರ್ಟಿ ಐಡೆಂಟಿಫಿಕೇಷನ್ ನಂಬರ್-ಪಿಐಡಿ) ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಆಸ್ತಿ ಅಧಿಕೃತವಿರಲಿ ಅಥವಾ ಅನಧಿಕೃತವಿರಲಿ ಪ್ರತಿ ಆಸ್ತಿಗೆ ಪಿಐಡಿ ನಂಬರ್ ಕಡ್ಡಾಯವಾಗಿ ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 2020ರ ಸೆ.1ರಿಂದ ಜಾರಿಯಾಗಿರುವ ತಿದ್ದುಪಡಿ ನಿಯಮಗಳ ಪ್ರಕಾರ ಅಧಿಕೃತ ಆಸ್ತಿಗಳಿಗೆ ಫಾರ್ಮ್-ಎನಲ್ಲಿ ಮತ್ತು ಅನಧಿಕೃತ ಆಸ್ತಿಗಳಿಗೆ ಫಾರ್ಮ್-ಬಿ ರಿಜಿಸ್ಟರ್ ನಲ್ಲಿ ಆಸ್ತಿ ವಿವರಗಳನ್ನು ನಮೂದಿಸಲು ಬಿಬಿಎಂಬಿ ಅಧಿಕಾರವಿದೆಯಾದರೂ ಎರಡೂ ವರ್ಗದ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಬೇಕು ಎಂದು ಕೋರ್ಟ್ ಹೇಳಿದೆ.

ನಗರದ ಮಧುಸೂಧನ್ ಭದ್ರಿ ಎಂಬುವರು ತಮ್ಮ ಆಸ್ತಿಯನ್ನು ಬಿಬಿಎಂಪಿ ಫಾರ್ಮ್-ಬಿ ರಿಜಿಸ್ಟರ್‍ನಲ್ಲಿ ಸೇರಿಸಿರುವುದು ಹೈಕೋರ್ಟ್‍ನ ಹಿಂದಿನ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸುವ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರರ ಆಸ್ತಿ ಅಧಿಕೃತವೋ ಅಥವಾ ಅನಧಿಕೃತವೋ ಎಂಬುದನ್ನು ಚಾಲ್ತಿಯಲ್ಲಿರುವ ನಿಯಮಗಳ ಅನುಸಾರ ನಿರ್ಣಯಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ. ಈ ವೇಳೆ ಪ್ರತಿ ಆಸ್ತಿಗೂ ಪಿಐಡಿ ಸಂಖ್ಯೆ ನೀಡುವಂತೆ ಆದೇಶಿಸಿದೆ.

ಹಿನ್ನೆಲೆ: 2014ರಲ್ಲಿ ಹೈಕೋರ್ಟ್ ಆಸ್ತಿ ತೆರಿಗೆ ನಿಯಮಗಳ ಅನುಸಾರ ಆಸ್ತಿಗಳನ್ನು ಫಾರ್ಮ್-ಎ ಮತ್ತು ಫಾರ್ಮ್-ಬಿ ಎಂದು ವರ್ಗೀಕರಿಸುವಂತಿಲ್ಲ ಎಂದಿತ್ತು. ಹಾಗೆಯೇ ಬಿಬಿಎಂಪಿ ಈ ಸಂಬಂಧ ಅಗತ್ಯ ತಿದ್ದುಪಡಿ ಮಾಡಿಕೊಳ್ಳಲು ಸಮ್ಮತಿಸಿತ್ತು. ಅದರಂತೆ ಬಿಬಿಎಂಪಿ 2020ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಫಾರ್ಮ್-ಎ ಮತ್ತು ಫಾರ್ಮ್-ಬಿ ಮೂಲಕ ಆಸ್ತಿ ತೆರಿಗೆ ವಿವರ ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News