ಸಿಎಂ ಬೊಮ್ಮಾಯಿ ಭೇಟಿಯಾದ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷ ಶಾಫಿ ಸಅದಿ

Update: 2021-11-26 12:47 GMT

ಬೆಂಗಳೂರು, ನ.26: ರಾಜ್ಯ ವಕ್ಫ್ ಮಂಡಳಿಗೆ ಪ್ರಪ್ರಥಮ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಹಾಗೂ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದರು. 

ಶುಕ್ರವಾರ ಮುಹಮ್ಮದ್ ಶಾಫಿ ಸಅದಿ ಅವರು ಶಶಿಕಲಾ ಜೊಲ್ಲೆ ಅವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ವಕ್ಫ್ ಮಂಡಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ. ರಾಜ್ಯದ ವಕ್ಫ್ ಮಂಡಳಿಯ ಅಭಿವೃದ್ಧಿಗೆ ಪರಿಣಾಮಕಾರಿಯಾದ ಆಡಳಿತ ನೀಡುವಂತೆ ನೂತನ ಅಧ್ಯಕ್ಷರಿಗೆ ಸೂಚನೆ ನೀಡಿ, ಅವರನ್ನು ಅಭಿನಂದಿಸಿದರು.

ರಾಜ್ಯ ವಕ್ಫ್ ಆಸ್ತಿಗಳ ಅಭಿವೃದ್ಧಿಗೆ 300 ಕೋಟಿ ರೂ. ಮಂಜೂರು ಮಾಡುವಂತೆ ಇದೇ ವೇಳೆ ಸಿಎಂ ಬೊಮ್ಮಾಯಿಗೆ ಶಾಫಿ ಸಅದಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಆರ್.ಅಬ್ದುಲ್ ರಿಯಾಝ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News