ಬೆಂಗಳೂರು: ಆ್ಯಪ್ ಮೂಲಕ ಅಕ್ರಮ ಸಾಲ; ಇಬ್ಬರು ಆರೋಪಿಗಳ ಸೆರೆ, ಚೀನಾ ಪ್ರಜೆಗೆ ಶೋಧ

Update: 2021-11-26 14:57 GMT

ಬೆಂಗಳೂರು, ನ.26: ಆನ್‍ಲೈನ್ ಮೊಬೈಲ್ ಆ್ಯಪ್ ಮೂಲಕ ಸಾಲ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುವುದು ಹಾಗೂ ನಕಲಿ ಕಂಪೆನಿಗಳನ್ನು ತೆರೆದು ಹಣವನ್ನು ಹೂಡಿಕೆ ಮಾಡಿಕೊಂಡು ವಂಚಿಸುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿ, ಚೀನಾ ಪ್ರಜೆ ಪತ್ತೆಗಾಗಿ  ಸಿಸಿಬಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. 

ಬಂಧಿತರನ್ನು ಲೈಕೋರೈಸ್ ಟೆಕ್ನಾಲಜಿಯ ಮಾನವ ಸಂಪನ್ಮೂಲ ಅಧಿಕಾರಿ ಕಾಮರಾಜ್ ಮೋರೆ(25) ಹಾಗೂ ಟೀಂ ಲೀಡರ್ ದರ್ಶನ್ ಚೌಹಾಣ್(22) ಎಂದು ಗುರುತಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಚೀನಾ ದೇಶದ ಪ್ರಜೆಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ. 

ನಗರದಲ್ಲಿ ನಕಲಿ ಕಂಪೆನಿಗಳನ್ನು ತೆರೆದು, ಆ್ಯಪ್‍ಗಳ ಮೂಲಕ ಸಾರ್ವಜನಿಕರಿಗೆ ವಾರದ ಬಡ್ಡಿಗೆ ಸಾಲ ನೀಡುತ್ತಿದ್ದರು. ಸಾಲಕ್ಕೆ ದುಬಾರಿ ವಾರದ ಬಡ್ಡಿಯನ್ನು ಸೇರಿಸಿ ವಾರ ವಾರ ಮರುಪಾವತಿ ಮಾಡುವಂತೆ ಮೊಬೈಲ್ ಹಾಗೂ ಇಂಟರ್‍ನೆಟ್ ಮೂಲಕ ಕರೆ ಮಾಡುತ್ತಿದ್ದರು. 

ಸಾಲ ಮರು ಪಾವತಿ ಮಾಡಲು ವಿಫಲರಾದ ಗ್ರಾಹಕರ ಖಾಸಗಿ ಮಾಹಿತಿಯನ್ನು ಆಕೆಯ ಹಾಗೂ ಆತನ ಸ್ನೇಹಿತರಿಗೆ ಕಳುಹಿಸಿ ಅವಮಾನ ಮಾಡಿ ಮಾನಸಿಕ ಹಿಂಸೆ ನೀಡಿ ಬೆದರಿಕೆ ಹಾಕುತ್ತಿದ್ದರು. ಮೊದಲು ಪರಾರಿಯಾಗಿರುವ ಚೀನಾ ದೇಶದ ಪ್ರಜೆಯೊಬ್ಬ ಅನಧಿಕೃತ ಕಂಪೆನಿಯನ್ನು ತೆರೆದಿದ್ದು, ಬಳಿಕ ಒಬ್ಬರ ಹೆಸರಿನಲ್ಲಿ ಐದಾರು ಕಂಪೆನಿಗಳನ್ನು ತೆರೆದಿದ್ದರು. 

ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ನಂಬಿಕೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಒಬ್ಬರ ಹೆಸರಿನಲ್ಲಿ 5 ರಿಂದ 6ರಂತೆ ಕಂಪೆನಿಗಳನ್ನು ನೋಂದಾಯಿಸಿ ಒಟ್ಟು 52 ಕಂಪೆನಿಗಳನ್ನು ನೋಂದಾವಣಿ ಮಾಡಿ ಅವುಗಳ ಹೆಸರಿನಲ್ಲಿ ಕೋಟಾಕ್ ಮಹೀಂದ್ರ, ಐಡಿಎಫ್‍ಸಿ ಇನ್ನಿತರ ಬ್ಯಾಂಕ್‍ಗಳಲ್ಲಿ ಖಾತೆ ತೆರೆದು ದುಬಾರಿ ಬಡ್ಡಿಯ ಸಾಲದ ಹಣವನ್ನು ಖಾತೆಗೆ ಜಮಾಯಿಸಿ ಆನ್‍ಲೈನ್ ಮುಖಾಂತರ ಆ ಖಾತೆಗಳಿಂದ ಕೋಟ್ಯಂತರ ಹಣವನ್ನು ನಮ್ಮ ದೇಶಕ್ಕೆ ರವಾನಿಸಿಕೊಂಡಿದ್ದರು ಎಂದು ಸಂದೀಪ್ ಪಾಟೀಲ್ ತಿಳಿಸಿದರು. ಬಂಧಿತ ಆರೋಪಿಗಳಿಂದ 83 ಮೊಬೈಲ್‍ಗಳನ್ನು ವಶಪಡಿಸಿಕೊಂಡು ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News