ಅನೈತಿಕ ಗೂಂಡಾಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ 'ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ' ಆಗ್ರಹ

Update: 2021-11-26 17:19 GMT

ಬೆಂಗಳೂರು, ನ. 26: ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ದುರುದ್ದೇಶಪೂರ್ವಕವಾಗಿ ಕೇಸು ದಾಖಲಿಸಿ ಸಮಾಜದಲ್ಲಿ ದ್ವೇಷ ಭಾವನೆ ಉಲ್ಬಣವಾಗುವಂತೆ ಮಾಡಿರುವ ದೂರುದಾರರ ಮೇಲೆ ನೀಡಿರುವ ದೂರುಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಸಂವಿಧಾನಿಕ ಅಸಭ್ಯ ಮತ್ತು ವೈಯಕ್ತಿಕ ತೇಜೋವಧೆ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡಿಸುವ, ಅನೈತಿಕ ಗೂಂಡಾಗಿರಿ ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ, ಸಿಎಂ, ರಾಜ್ಯಪಾಲ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.

ಶುಕ್ರವಾರ ಇಲ್ಲಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ಐಕ್ಯತಾ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ರ್ಯಾಲಿ ಹಾಗೂ ಸಮಾವೇಶದಲ್ಲಿ ಮೇಲ್ಕಂಡ ಹಕ್ಕೊತ್ತಾಯಗಳನ್ನು ಮಂಡಿಸಿದ್ದು, ಮೀನುಗಾರಿಕೆ ಹಾಗೂ ಬಂದರು ಖಾತೆ ಸಚಿವ ಎಸ್.ಎಂ.ಅಂಗಾರ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಎಲ್ಲ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಲ್ಲಿ ಸಂವಿಧಾನದ ಪ್ರಸ್ತಾವನೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ತರಾತುರಿಯಲ್ಲಿ ಅನುಷ್ಠಾನಕ್ಕೆ ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಮರು ಪರಿಶೀಲಿಸಬೇಕು. ಬಸವನಗುಡಿ ಪೊಲೀಸ್ ಠಾಣೆಯನ್ನು ದುರ್ಬಳಕೆ ಮಾಡಿಕೊಂಡು ಅಬ್ರಾಹ್ಮಣರ ವಿರುದ್ಧ ದೂರು ದಾಖಲಿಸುತ್ತಿರುವ ಅಲ್ಲಿನ ಠಾಣಾಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಲಾಗಿದೆ.

ನಟ ಚೇತನ್ ಮತ್ತು ಹಂಸಲೇಖ ವಿರುದ್ಧ ದಾಖಲಾಗಿರುವ ಆಧಾರರಹಿತ ಮೊಕದ್ದಮೆಗಳನ್ನು ಕೂಡಲೇ ಖುಲಾಸೆಗೊಳಿಸಬೇಕು. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಹೋರಾಟ ಮಾಡುವ ಚಿಂತಕರು, ಹೋರಾಟಗಾರರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಈ ಸಂಬಂಧ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಯಾವಕಾಶ ನೀಡಬೇಕು ಎಂದು ಸಮಿತಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News