ಜಗತ್ತಿನ ಅತಿ ದೊಡ್ಡ ನದಿ ಜೋಡಣೆ ಯೋಜನೆ ಒಂದೂವರೆ ಶತಮಾನವಾದರೂ ಸಾಕಾರಗೊಳ್ಳಲಿಲ್ಲ

Update: 2021-11-26 19:30 GMT

ಇತ್ತೀಚೆಗೆ ಕಾವೇರಿ ನದಿಯನ್ನು ವೆಲ್ಲಾರು, ವೈಗೈ ಮತ್ತು ಗುಂಡಾರ ನದಿಗಳಿಗೆ ಜೋಡಿಸುವ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು, ಪುದುಚೇರಿ ಮತ್ತು ಕೇಂದ್ರ ಸರಕಾರಗಳಿಗೆ ಸರ್ವೋಚ್ಚ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಕೃಷ್ಣಾ, ಕಾವೇರಿ, ಗೋದಾವರಿ ಮತ್ತು ಪಾಲಾರ್ ನದಿ ಜೋಡಣೆಯ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಮೊದಲು ಆಯಾ ರಾಜ್ಯಗಳ (ನದಿಪಾತ್ರಗಳ) ಪಾಲಿನ ನೀರಿನ ಹಂಚಿಕೆ ಆಗಬೇಕು ಮತ್ತು ಕರ್ನಾಟಕ ಸಲ್ಲಿಸಿರುವ ಅಹವಾಲನ್ನು ಪರಿಗಣಿಸಬೇಕು ಎಂದು ಕೇಂದ್ರ ಗೃಹ ಸಚಿವರು ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಅಂದರೆ ನದಿಗಳ ಜೋಡಣೆಯ ಬಗ್ಗೆ ಮತ್ತೊಮ್ಮೆ ಕರಡು ಮರು ತಯಾರಾಗುತ್ತಿದೆ. ಗೋದಾವರಿ-ಕೃಷ್ಣ-ಕಾವೇರಿ ಸಂಪರ್ಕ ಯೋಜನೆಯ ವರದಿ ಮೂರು ನದಿಗಳ ಸಂಪರ್ಕ ಯೋಜನೆಯನ್ನು ಒಳಗೊಂಡಿದೆ. ಗೋದಾವರಿ (ಇನ್ಚಂಪಲ್ಲಿ/ಜನಂಪೇಟ-ಕೃಷ್ಣ (ನಾಗಾರ್ಜುನಸಾಗರ), ಕೃಷ್ಣ (ನಾಗಾರ್ಜುನಸಾಗರ)-ಪೆನ್ನಾರ್ (ಸೋಮಸಿಲಾ) ಮತ್ತು ಪೆನ್ನಾರ್ (ಸೋಮಸಿಲಾ)-ಕಾವೇರಿ ಲಿಂಕ್ ಯೋಜನೆ ಸೇರಿವೆ. ದೇಶದಲ್ಲಿ ಮುಖ್ಯವಾಗಿ ಮೂರು ನದಿ ಜೋಡಣೆ ಘಟಕಗಳನ್ನು ಗುರುತಿಸಲಾಗಿದೆ. ಉತ್ತರ ಹಿಮಾಲಯ ಘಟಕ, ದಕ್ಷಿಣ ಪರ್ಯಾಯ ದ್ವೀಪ ಘಟಕ ಮತ್ತು ಅಂತರ್‌ರಾಜ್ಯ ನದಿ ಜೋಡಣೆ ಘಟಕ. ಪರ್ಯಾಯ ದ್ವೀಪ ನಾಲ್ಕು ಘಟಕಗಳನ್ನು ಹೊಂದಿದೆ.

1.ಮಹಾದಾಯಿ-ಗೋದಾವರಿ-ಕೃಷ್ಣಾ-ಪಾಲಾರ್-ಪೆನ್ನಾರ್-ಕಾವೇರಿ ಜೋಡಣೆ. 2.ಪಶ್ಚಿಮಕ್ಕೆ ಹರಿಯುವ ನದಿಗಳ ಜೋಡಣೆ. 3.ಕೆನ್-ಚಂಬಲ್ ನದಿಗಳ ಜೋಡಣೆ ಮತ್ತು 4.ಪಶ್ಚಿಮ ನದಿಗಳ ಹೆಚ್ಚುವರಿ ನೀರನ್ನು ಪೂರ್ವದಿಕ್ಕಿಗೆ ಹರಿಯುವ ನದಿಗಳಿಗೆ ಹರಿಸುವುದು. ಬ್ರಿಟಿಷ್ ಇಂಜಿನಿಯರ್ ಅರ್ಥರ್ ಥಾಮಸ್ ಕಾಟನ್ (1803-1899) ಭಾರತದಲ್ಲಿ ನೀರಾವರಿ ಮತ್ತು ಕಾಲುವೆಗಳನ್ನು (ದೋಣಿ ಸಂಚರಣೆಯೊಂದಿಗೆ) ಕಟ್ಟುವುದಕ್ಕೆ ತನ್ನ ಇಡೀ ಬದುಕನ್ನೇ ಮುಡಿಪಾಗಿಟ್ಟರು. ಇವರು 1858ರಲ್ಲಿಯೇ ಭಾರತದಲ್ಲಿ ಜಗತ್ತಿನ ಅತಿ ದೊಡ್ಡ ನದಿ ಜೋಡಣೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಕನಸು ಕಂಡಿದ್ದರು. 1970ರಲ್ಲಿ ಕೇಂದ್ರ ನೀರಾವರಿ ಸಚಿವರಾದ ಕೆ.ಎಲ್.ರಾವ್ ಈ ಯೋಜನೆಗೊಂದು ರೂಪಕೊಟ್ಟು ನಾಗಾರ್ಜುನ ಸಾಗರ ಮತ್ತು ಭಾಕ್ರಾನಂಗಲ್ ಅಣೆಕಟ್ಟುಗಳನ್ನು ಕಟ್ಟಿಸಿದರು. ನಮ್ಮ ದೇಶ ಜಗತ್ತಿನ ಶೇ.18 ಜನಸಂಖ್ಯೆಯನ್ನು ಮತ್ತು ಶೇ.4 ಜಲಸಂಪನ್ಮೂಲವನ್ನು ಹೊಂದಿದೆ. ಜಗತ್ತಿನ ಬೃಹತ್ ನದಿ ಜೋಡಣೆ ಯೋಜನೆಯಲ್ಲಿ ಅಣೆಕಟ್ಟುಗಳು, ಸರೋವರಗಳು, ಕಾಲುವೆಗಳು ಸೇರಿದ್ದು ಮಳೆಗಾಲದ ನೆರೆಯನ್ನು ನಿಯಂತ್ರಣ ಮಾಡುವುದರೊಂದಿಗೆ ಕೃಷಿ, ಕುಡಿಯುವ ನೀರು, ಮೀನುಗಾರಿಕೆ, ದೋಣಿ ಸಂಚಾರವೂ ಸೇರಿದೆ. ಈ ಯೋಜನೆಯಲ್ಲಿ ಉತ್ತರ ಭಾರತದ 14, ಪರ್ಯಾಯ ದ್ವೀಪದ 16 ಮತ್ತು ರಾಜ್ಯಗಳ ನಡುವಿನ 37 ನದಿಗಳ ಜೋಡಣೆ ಸೇರಿದೆ.

ಕೇಂದ್ರ ಸರಕಾರದ ಜಲ ಸಂಪನ್ಮೂಲಗಳ ಸಚಿವಾಲಯದ ಕೆಳಗೆ, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತದೆ. ಹಿಮಾಲಯ ಪರ್ವತಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಕಠಿಣವಾದ ಕೆಲಸವಾಗಿದೆ. ಒಂದೊಂದೆ ನದಿ ಜೋಡಣೆಯನ್ನು ತೆಗೆದುಕೊಂಡಿದ್ದರೆ ಈಗಾಗಲೇ ಕೆಲವು ಭಾಗಗಳಲ್ಲಿ ಇದರ ಫಲವನ್ನು ಪಡೆಯಬಹುದಿತ್ತು. ಈ ಯೋಜನೆಯನ್ನು ವಿರೋಧಿಸುವವರೂ ಇದ್ದಾರೆ. ಇದರಿಂದ ಪರಿಸರ, ನದಿಗಳ ಮಾಲಿನ್ಯ, ಅರಣ್ಯ/ವನ್ಯ ಪ್ರಾಣಿಗಳ ನಾಶ, ಅಗಾಧ ಜನರ ಸ್ಥಳಾಂತರ, ಫಲವತ್ತಾದ ನೆಲ ಮುಳುಗುವುದರ ಜೊತೆಗೆ ಇನ್ನೂ ಅನೇಕ ವ್ಯತಿರಿಕ್ತ ಪರಿಣಾಮಗಳು ಎದುರಾಗುತ್ತವೆ ಎನ್ನಲಾಗಿದೆ. ದೇಶದಲ್ಲಿ ವಾರ್ಷಿಕ ಸರಾಸರಿ 4,000 ಬಿಲಿಯನ್ ಘನ ಮೀಟರ್ (ಬಿ.ಘ.ಮೀ.) ಮಳೆ (ಹೆಚ್ಚಾಗಿ ಜೂನ್-ಅಕ್ಟೋಬರ್) ಬೀಳುತ್ತದೆ. ದೇಶದ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಹೆಚ್ಚು ಮಳೆ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಕಡಿಮೆ ಮಳೆ ಬೀಳುತ್ತದೆ. ಗಂಗಾ-ಬ್ರಹ್ಮಪುತ್ರಾ-ಮೇಘನಾ ನದಿಗಳಲ್ಲಿ ಹರಿದುಬರುವ ಹೆಚ್ಚು ನೀರನ್ನು ದೇಶದ ಇತರ ಪ್ರದೇಶಗಳಿಗೆ ಹರಿಸುವ ಯೋಜನೆ ಇದೆ.

1980ರಲ್ಲಿ ಜಲಸಂಪನ್ಮೂಲ ವಿಭಾಗ ಈ ಯೋಜನೆಯ ದೊಡ್ಡ ವರದಿಯನ್ನು ಹೊರತಂದಿತು. ಆದರೆ ಆಗಿನ ಸರಕಾರ ಇದನ್ನು ಕೈಬಿಟ್ಟು, 1982ರಲ್ಲಿ NWDA ಮೂಲಕ ಒಂದು ಸಮಿತಿ ಮಾಡಿ ಅದನ್ನು ವಿಸ್ತೃತ ಅಧ್ಯಯನ ಮಾಡುವಂತೆ ಕೋರಿತು. ಈ ಸಮಿತಿ ಜಲಾನಯನಗಳು ಮತ್ತು ಕಾಲುವೆಗಳೊಂದಿಗೆ ನದಿ ಜೋಡಣೆಯ ಬಗ್ಗೆ ಒಂದು ವರದಿ ತಯಾರಿಸಿತು. ಇದರ ನಂತರ ಕಳೆದ ನಾಲ್ಕು ದಶಕಗಳಲ್ಲಿ ಅನೇಕ ಉಪ ವರದಿಗಳು ಬಂದರೂ ಯಾವುದೇ ಯೋಜನೆಯೂ ಕಾರ್ಯರೂಪಕ್ಕೆ ಬರಲಿಲ್ಲ. 1999ರಲ್ಲಿ ಮತ್ತೊಮ್ಮೆ ಎಲ್ಲಾ ವರದಿಗಳನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಇದರಲ್ಲಿ ಅಂತರ್‌ನದಿ ಪಾತ್ರಗಳ ನೀರಿನ ವರ್ಗಾವಣೆಯ ಜೊತೆಗೆ ಆಂತರಿಕ ಜಲಾನಯನ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಲಾಯಿತು. 2002ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಕೇಂದ್ರ-ರಾಜ್ಯ ಸರಕಾರಗಳ ಅಧಿಕಾರಕ್ಕೆ ಬಿಟ್ಟಿದ್ದು ಎಂದು ತೀರ್ಪು ನೀಡಿತು.

ಈ ಯೋಜನೆಯಲ್ಲಿ 150 ದಶಲಕ್ಷ ಎಕರೆ ಅಡಿ (185 ಬಿ.ಘ.ಮೀ.) ನೀರನ್ನು ಸಂಗ್ರಹಿಸಬಹುದಾಗಿದೆ. ಇದರಿಂದ 35 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಮತ್ತು 40,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ಸೇರಿದೆ. ದೇಶದಲ್ಲಿ ವಾರ್ಷಿಕ 1,440 ದಶಲಕ್ಷ ಹೆಕ್ಟೇರ್ ಅಡಿ (1,770 ಬಿ.ಘ.ಮೀ.) ಮಳೆ ನೀರು ಬಿದ್ದರೂ ಕೇವಲ 220 ದಶಲಕ್ಷ ಎಕರೆ ನೀರನ್ನು ಮಾತ್ರ 1979ರಲ್ಲಿ ಉಪಯೋಗಿಸಿಕೊಳ್ಳಲಾಯಿತು. ಇದರಿಂದ ಹಲವಾರು ಪ್ರದೇಶಗಳು ನಿರಂತರವಾಗಿ ನೆರೆಗೆ ತುತ್ತಾಗುತ್ತಲೇ ಇವೆ. 1979ರವರೆಗೆ ದೇಶದಲ್ಲಿ 600 ಸಣ್ಣ/ದೊಡ್ಡ ಗಾತ್ರದ (171 ಬಿ.ಘ.ಮೀ. ನೀರು ನಿಲ್ಲುವ) ಅಣೆಕಟ್ಟುಗಳನ್ನು ಕಟ್ಟಲಾಯಿತು. ಗಂಗಾ-ಬ್ರಹ್ಮಪುತ್ರ-ಮೇಘನಾ ನದಿಗಳಲ್ಲೇ ಸುಮಾರು 1,000 ದಶಲಕ್ಷ ಎಕರೆ ಅಡಿ ನೀರು ಹರಿದು ಸಮುದ್ರ ಸೇರುತ್ತದೆ. ಆದರೆ ಕಾವೇರಿ, ಯಮುನಾ, ಸಟ್ಲೆಜ್, ರಾವಿ ಇನ್ನಿತರ ಅಂತರ್‌ರಾಜ್ಯ ನದಿ ಜಲಾನಯನ ಪ್ರದೇಶಗಳಲ್ಲಿ ಯಾವಾಗಲೂ ನೀರಿನ ಕೊರತೆ ಕಾಣಿಸಿಕೊಳ್ಳುತ್ತದೆ. ದೇಶದ ಹೆಚ್ಚು ಪ್ರದೇಶ ಯಾವಾಗಲೂ ಕ್ಷಾಮದಿಂದ ತತ್ತರಿಸುತ್ತಿದ್ದರೆ ದೇಶದ ಇತರ 40 ದಶಲಕ್ಷ ಹೆಕ್ಟೇರ್ ನೆಲ ನೆರೆಯ ಹಾವಳಿಗೆ ಸಿಲುಕಿಕೊಳ್ಳುವುದು ಪ್ರತಿ ವರ್ಷವೂ ಒಂದು ಪದ್ಧತಿಯಂತೆ ನಡೆಯುತ್ತಿದೆ.

ಇನ್ನು ನೆರೆಯಿಂದ ನಾಶವಾಗುವ ಬೆಳೆಗಳ ವೆಚ್ಚ ಉದಾಹರಣೆಗೆ ಕರ್ನಾಟಕದಲ್ಲಿ 2015ರಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಂದ ಆದ ನಷ್ಟ ಸುಮಾರು 15,636 ಕೋಟಿ ರೂ. 2013-14ರಲ್ಲಿ ಅಸ್ಸಾಂ, ಒಡಿಶಾ, ಜಮ್ಮು/ಕಾಶ್ಮೀರದಲ್ಲಿ ನೆರೆಗಳಿಂದ ನಷ್ಟವಾದ ಒಟ್ಟು ಬೆಲೆ ಸುಮಾರು 19 ಸಾವಿರ ಕೋಟಿ ರೂ. 2020ರಲ್ಲಿ ಭಾರತದಲ್ಲಿ ಒಟ್ಟು 87 ಬಿಲಿಯನ್ ಅಮೆರಿಕನ್ ಡಾಲರ್‌ಗಳು ನಷ್ಟವಾಗಿದೆ ಎನ್ನಲಾಗಿದೆ. 2019ರಲ್ಲಿ ಬಂದ ಚಂಡಮಾರುತ ‘ಪೆನಿ’ ಒಂದರಿಂದಲೇ 28 ದಶಲಕ್ಷ ಜನರು ತೊಂದರೆಗೆ ಸಿಲುಕಿಕೊಂಡಿದ್ದರು. ಈ ವರ್ಷ ನಿರಂತರವಾಗಿ ಬರುತ್ತಿರುವ ಚಂಡಮಾರುತಗಳಿಂದ ಯಾವ ಬೆಳೆಯೂ ರೈತರಿಗೆ ದಕ್ಕಲಿಲ್ಲ ಎಂದೇ ಹೇಳಬಹುದು. ಹಿಮಾಲಯ ಘಟಕವನ್ನು ಬಿಟ್ಟು ಈ ಬೃಹತ್ ನದಿ ಜೋಡಣೆಯ ಯೋಜನೆಯನ್ನು 4 ವಿಭಾಗಗಳಾಗಿ ಮಾಡಲಾಗಿದೆ: 1.ಮಹಾನದಿ-ಗೋದಾವರಿ- ಕೃಷ್ಣ-ಕಾವೇರಿ. 2.ಪಶ್ಚಿಮಕ್ಕೆ ಹರಿಯುವ ನದಿಗಳ ನೀರನ್ನು (ಮುಂಬೈ ಉತ್ತರಕ್ಕೆ-ತಾಪಿಯ ದಕ್ಷಿಣಕ್ಕೆ) ಮುಂಬೈ ಮಹಾನಗರಕ್ಕೆ ಕುಡಿಯಲು ಮತ್ತು ಮಹಾರಾಷ್ಟ್ರದ ಕೃಷಿಗೆ ಬಳಸಲಾಗುತ್ತದೆ. 3.ಕೆನ್-ಚಂಬಲ್ ನೀರು, ಮಧ್ಯಪ್ರದೇಶ-ಉತ್ತರ ಪ್ರದೇಶಕ್ಕೆ ಕುಡಿಯಲು ಮತ್ತು ಕೃಷಿಗೆ. 4.ಪಶ್ಚಿಮಕ್ಕೆ ಹರಿಯುವ ನದಿಗಳನ್ನು ಕೃಷ್ಣ-ಕಾವೇರಿ ನದಿಗಳಿಗೆ ಜೋಡಣೆ ಮಾಡುವುದು.

ಕ್ರಿ.ಶ.2050ಕ್ಕೆ ಭಾರತದ ಜನಸಂಖ್ಯೆ 150 ಕೋಟಿ ದಾಟಲಿದ್ದು ಹೆಚ್ಚು ಆಹಾರ ಧಾನ್ಯಗಳು ಬೆಳೆಯಲು ನೀರು ಬೇಕಾಗುತ್ತದೆ. ನದಿ ಮತ್ತು ಅಂತರ್ಜಲ ನೀರಿನಿಂದ ಕೃಷಿ ಮಾಡಬೇಕಾಗುತ್ತದೆ. 1950ರಲ್ಲಿ 50 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿದ್ದ ಭಾರತ 2019-20ರಲ್ಲಿ 291.95 ದಶಲಕ್ಷ ಟನ್ ಉತ್ಪಾದಿಸಿದೆ. ನೀರಾವರಿ ಪ್ರದೇಶ 22 ದಶಲಕ್ಷ ಹೆಕ್ಟೇರ್‌ಗಳಿಂದ 95 ಹೆಕ್ಟೇರ್‌ಗಳಿಗೆ ಹೆಚ್ಚಿದೆ. 2050ರಲ್ಲಿ 150 ಕೋಟಿ ಜನರಿಗೆ ಕನಿಷ್ಠ 450 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸಬೇಕಾಗುತ್ತದೆ. ಇದಕ್ಕಾಗಿ ಇನ್ನೂ 160 ದಶಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಅಳವಡಿಸಬೇಕಿದೆ. ಸಾಂಪ್ರದಾಯಿಕ ಮೂಲಗಳಿಂದ 40 ದಶಲಕ್ಷ ಹೆಕ್ಟೇರ್ ಭೂಮಿಯನ್ನು ತಯಾರು ಮಾಡಬಹುದು. ಒಟ್ಟಿನಲ್ಲಿ ಎರಡೂ ಸೇರಿ 160 ದಶಲಕ್ಷ ಹೆಕ್ಟೇರ್ ಭೂಮಿಯನ್ನು ಕೃಷಿಗೆ ಅಳವಡಿಸುವ ಯೋಜನೆಯನ್ನು ಈಗಿಂದಲೇ ತುರ್ತಾಗಿ ಮಾಡಬೇಕಿದೆ. ಈ ಯೋಜನೆಯಲ್ಲಿ ಒಟ್ಟು 37 ನದಿಗಳ ಜೋಡಣೆಯಿದ್ದು 3,000 ಅಣೆಕಟ್ಟು/ಸರೋವರಗಳಲ್ಲಿ ನೀರು ಶೇಖರಣೆ ಮಾಡುವ ಯೋಜನೆ ಇದೆ. 50-100 ಮೀಟರ್ ಅಗಲ, 6 ಮೀಟರ್ ಆಳದ ಕಾಲುವೆಗಳಲ್ಲಿ ದೋಣಿಗಳ ಮೂಲಕ ಸಾಗಣೆಯೂ ಇರುತ್ತದೆ. ಈ ಯೋಜನೆಯ ಒಟ್ಟು ಅಂದಾಜು 2002ರಲ್ಲಿ, 5,60,000 ಕೋಟಿ ರೂ. ಈಗ ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ಸುಮಾರು ರೂ. 5.60 ಲಕ್ಷ ಕೋಟಿ ಎನ್ನಲಾಗಿದೆ. ಈ ಯೋಜನೆಯಲ್ಲಿ 12,500 ಕಿ.ಮೀ. ಉದ್ದದ ಕಾಲುವೆಗಳು. ಹಳ್ಳಿ, ಪಟ್ಟಣಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೀನುಗಾರಿಕೆ ಪಾಲನೆಯೂ ಸೇರಿದೆ. ಇದರಲ್ಲಿ 3,700 ಮೆಗಾವ್ಯಾಟ್ ವಿದ್ಯುತ್ತನ್ನು, ನೀರನ್ನು ಕೆಳಮಟ್ಟದಿಂದ ಮೇಲಕ್ಕೆ ಎತ್ತಲು ಉಪಯೋಗಿಸಲಾಗುತ್ತದೆ. ಈ ವರ್ಷದಿಂದಲೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದರೂ ಕನಿಷ್ಠ 100 ವರ್ಷಗಳಾದರೂ ಹಿಡಿಯಬಹುದು. ಪ್ರಸ್ತುತ ದೇಶದಲ್ಲಿ 19 ದೊಡ್ಡ ನದಿ ಪಾತ್ರಗಳಲ್ಲಿ ಹರಿಯುವ ನೀರಿನಲ್ಲಿ ಕೇವಲ 35 ಭಾಗದಷ್ಟು ನೀರನ್ನು ಮಾತ್ರ ಉಪಯೋಗಿಸಿಕೊಳ್ಳಲಾಗುತ್ತಿದೆ.

150 ವರ್ಷಗಳಿಂದ ಕಾಗದಗಳ ಮೇಲೆಯೇ ಹರಿದಾಡುತ್ತಿರುವ ಈ ಯೋಜನೆ ಹಾಗೆಯೇ ಉಳಿದುಬಿಡುತ್ತದೆಯೇ ಎನ್ನುವ ಪ್ರಶ್ನೆಗೆ ಒಂದು ಸಣ್ಣ ಸಮಾಧಾನ ಸಿಕ್ಕಿದೆ. ಅದೆಂದರೆ 2015-16ರಲ್ಲಿ ಕೆನ್-ಬಿಟ್ವಾ ನದಿಗಳ ಜೋಡಣೆಯನ್ನು ದೇಶದ ಮೊದಲ ಪ್ರಾಯೋಗಿಕ ಯೋಜನೆಯಾಗಿ ತೆಗೆದುಕೊಳ್ಳಲಾಯಿತು. ಅಗಾಧ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಭಾರತ ಮುಂದಿನ ದಿನಗಳಲ್ಲಿ ಸ್ವಲ್ಪವಾದರೂ ನೆಮ್ಮದಿಯಿಂದ ಇರಬೇಕಾದರೆ ಈ ಬೃಹತ್ ಯೋಜನೆಯನ್ನು ಹಂತಹಂತವಾಗಿ ಮುಗಿಸಬೇಕಾಗಿದೆ. ಇದುವರೆಗೂ ಮತ್ತೆಮತ್ತೆ ಮರು ತಯಾರಿಸಿರುವ ಪೂರ್ವ ಕಾರ್ಯಸಾಧ್ಯತಾ ವರದಿ, ಕಾರ್ಯಸಾಧ್ಯತಾ ವರದಿ ಮತ್ತು ವಿವರವಾದ ಯೋಜನಾ ವರದಿಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಕಳೆದ 150 ವರ್ಷಗಳ ಯೋಜನೆಗಳು ಒಂದು ಕಡೆಗಿರಲಿ, 1947ರಿಂದ ಇಂದಿನವರೆಗೂ ಕೆನ್-ಬಿಟ್ವಾ ಮತ್ತು ಗೋದಾವರಿ-ಕೃಷ್ಣಾ ನದಿಗಳ ಎರಡು ಸಣ್ಣ ಕೊಂಡಿಗಳು ಮಾತ್ರ ಸಂಪರ್ಕ ಪಡೆದಿವೆ. ಅದನ್ನು ಬಿಟ್ಟರೆ ವರದಿಗಳನ್ನು ತಯಾರು ಮಾಡುವಲ್ಲೇ 163 ವರ್ಷಗಳು ಕಳೆದುಹೋಗಿವೆ. ನಮ್ಮ ಇಂದಿನ ಪ್ರಜಾಪ್ರಭುತ್ವದ ಪರಿಸ್ಥಿತಿಯಲ್ಲಿ ನೂರು ವರ್ಷಗಳಲ್ಲಿ ಈ ಯೋಜನೆ ಸಾಧ್ಯವೇ ಎನ್ನುವ ಪ್ರಶ್ನೆ ಏಳುತ್ತದೆ. ಒಂದು ವೇಳೆ ಈ ಯೋಜನೆಯನ್ನು ಸಂಪೂರ್ಣವಾಗಿ ಮುಗಿಸಿದರೂ ಅದು ವರವೋ ಶಾಪವೋ ನೋಡುವುದಕ್ಕೆ ನಾವ್ಯಾರೂ ಇರುವುದಿಲ್ಲ. ಅಷ್ಟರಲ್ಲಿ ಜಗತ್ತಿನಲ್ಲಿ ಏನೆಲ್ಲ ನಡೆದು ಹೋಗಿರುತ್ತದೋ? ಚೀನಾ ಜಗತ್ತಿನ ಬೃಹತ್ ಅಣೆಕಟ್ಟು ‘ತ್ರೀ ಗಾರ್ಜಸ್ ಅಣೆಕಟ್ಟು’ ಕಟ್ಟಿ (2012) ಅದರಲ್ಲಿ ನೀರು ತುಂಬಿಕೊಂಡಿದ್ದೆ ಭೂಮಿ 0.06 ಸೆಕೆಂಡುಗಳಷ್ಟು ಪರಿಭ್ರಮಿಸುವುದು ಕಡಿಮೆಯಾಗಿದೆಯಂತೆ. ಈ ಅಣೆಕಟ್ಟು ಒಡೆದುಹೋದಲ್ಲಿ ಭೂಮಿಯ ಅಕ್ಷ ಮತ್ತು ಪರಿಭ್ರಮಣದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಲಕ್ಷಾಂತರ ಜನರು ಕೊಚ್ಚಿಹೋಗುತ್ತಾರೆ ಎನ್ನಲಾಗಿದೆ

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News