ದೇಶಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ: ವಿಚಾರಣೆಗೆ ಹಾಜರಾಗುವಂತೆ ಪರಮ್ ಬೀರ್ ಸಿಂಗ್‌ಗೆ ಆಯೋಗ ಸೂಚನೆ

Update: 2021-11-26 18:44 GMT

ಮುಂಬೈ, ನ. 26: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುತ್ತಿರುವ ಏಕಸದಸ್ಯ ಆಯೋಗ ನವೆಂಬರ್ 29ರಂದು ತನ್ನ ಮುಂದೆ ಹಾಜರಾಗುವಂತೆ ಶುಕ್ರವಾರ ಪರಮ್‌ಬೀರ್ ಸಿಂಗ್‌ಗೆ ನಿರ್ದೇಶಿಸಿದೆ.

 ಎನ್‌ಸಿಪಿಯ ನಾಯಕ ದೇಶಮುಖ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಲು ಈ ವರ್ಷ ಮಾರ್ಚ್‌ನಲ್ಲಿ ರೂಪಿಸಲಾಗಿದ್ದ ನ್ಯಾಯಮೂರ್ತಿ ಕೆ.ಯು. ಚಂಡಿವಾಲ್ ಆಯೋಗ ವಿಚಾರಣೆಗೆ ಹಾಜರಾಗುವಂತೆ ಮುಂಬೈಯ ಮಾಜಿ ಪೊಲೀಸ್ ಆಯಕ್ತ ಪರಮ್ ಬೀರ್ ಸಿಂಗ್‌ಗೆ ನಿರ್ದೇಶನ ನೀಡಿತು.

ಸಿಂಗ್ ತನ್ನ ಮುಂದೆ ಹಾಜರಾಗದೇ ಇದ್ದರೆ, ಈ ಹಿಂದೆ ನೀಡಲಾದ ಜಾಮೀನು ಯೋಗ್ಯವಾದ ಬಂಧನ ವಾರಂಟ್ ಅನ್ನು ಜಾರಿಗೊಳಿಸಲಾಗುವುದು ಎಂದು ಗುರುವಾರ ಆಯೋಗ ಎಚ್ಚರಿಕೆ ನೀಡಿತ್ತು.

ನ್ಯಾಯಾಲಯದಲ್ಲಿ ಶುಕ್ರವಾರ ಪ್ರಕರಣ ವಿಚಾರಣೆಗೆ ಬಂದಾಗ ಸಿಂಗ್ ಅವರ ವಕೀಲ, ಸಿಂಗ್ ವಿರುದ್ಧ ದಾಖಲಿಸಲಾದ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಅವರು ಥಾಣೆಯಲ್ಲಿ ಇರುವುದರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಆಯೋಗಕ್ಕೆ ತಿಳಿಸಿದರು.

ಸಿಂಗ್ ಅವರು ಶನಿವಾರ ನ್ಯಾಯಾಲಯದ ಮುಂದೆ ಹಾಜರಾಗಲು ಸಿದ್ಧರಾಗಿದ್ದಾರೆ ಎಂದರು. ಆದರೆ, ಇದಕ್ಕೆ ಬದಲು ಸೋಮವಾರ ತನ್ನ ಮುಂದೆ ಹಾಜರಾಗುವಂತೆ ಆಯೋಗ ಸಿಂಗ್‌ಗೆ ಸೂಚಿಸಿತು.

 ತನ್ನ ಮುಂದೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಈ ಹಿಂದೆ ಆಯೋಗ ಸಿಂಗ್‌ಗೆ ಹಲವು ಬಾರಿ ದಂಡ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News