'ಯೋಜನಾಬದ್ಧವಾಗಿ ಬೆಂಗಳೂರಿನ ಅಭಿವೃದ್ಧಿ'ಗೆ ಚಿಂತನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-11-28 16:20 GMT

ಬೆಂಗಳೂರು, ನ. 28: `ಮುಂದಿನ ದಿನಗಳಲ್ಲಿ ಯೋಜನಾಬದ್ಧವಾಗಿ ಬೆಂಗಳೂರು ನಗರವನ್ನು ಅಭಿವೃದ್ಧಿ ಮಾಡಲು ಚಿಂತನೆ ನಡೆಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಬಯೋಕಾನ್ ಸಂಸ್ಥೆ ಆಯೋಜಿಸಿದ್ದ `ಬೆಂಗಳೂರು ಅಜೆಂಡಾ' ಕುರಿತ ಚರ್ಚೆಯಲ್ಲಿ ಪಾಲ್ಗುಳ್ಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬೆಂಗಳೂರಿನ ಪ್ರಸಿದ್ಧ ಉದ್ಯಮಿಗಳು, ನಗರದ ಬಗ್ಗೆ ಆಸಕ್ತಿ ವಹಿಸಿ,  ಹಲವಾರು ಸಲಹೆ ಸೂಚನೆಗಳನ್ನು ಹಿಂದಿನ ಸರಕಾರದವರಿಗೂ ನೀಡುತ್ತಾ ಬಂದಿದ್ದಾರೆ. ಕೆಲವು ಹಿರಿಯ ಉದ್ಯಮಿಗಳು  ಒಟ್ಟಾರೆ ಕರ್ನಾಟಕದ ಹಾಗೂ ಬೆಂಗಳೂರಿನ ಆರ್ಥಿಕತೆ ಹಾಗೂ ಅಭಿವೃದ್ಧಿ ಮತ್ತು ಯೋಜನೆಗಳ ಬಗ್ಗೆ ಯಾವ ರೀತಿಯ ಕೆಲಸಗಳನ್ನು ಮಾಡಬೇಕೆನ್ನುವ ಪ್ರಾಥಮಿಕ ಚಿಂತನೆಗಾಗಿ ನನ್ನನ್ನು ಆಹ್ವಾನಿಸಿರುವುದರಿಂದ ನಾನು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದು ಹೇಳಿದರು.

`ಎಲ್ಲ ವಿಚಾರಗಳನ್ನು ತಿಳಿದುಕೊಂಡ ಮೇಲೆ, ಇನ್ನಷ್ಟು ಚರ್ಚೆಯ ಅವಶ್ಯಕತೆಯಿದೆ. ವಿವಿಧ ರಂಗದಲ್ಲಿರುವವರೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿದ್ದಾರೆ. ವಿಚಾರಗಳನ್ನು ತಿಳಿದುಕೊಂಡ ನಂತರ ಅಧಿಕಾರಿಗಳು, ಬೆಂಗಳೂರು ನಗರದ ಶಾಸಕರ ಜೊತೆಗೂ ಸಚಿವ ಸಂಪುಟದ ಸದಸ್ಯರೊಂದಿಗೆ ಚರ್ಚೆ ಮಾಡಿ, ತದನಂತರ ಬೆಂಗಳೂರಿನ ಅಜೆಂಡಾವನ್ನು ಶಾಸನಸಭೆಯಲ್ಲಿಯೂ ಇಟ್ಟು ಎಲ್ಲರ ಅಭಿಪ್ರಾಯವನ್ನು ಪಡೆಯಲಾಗುವುದು ಎಂದರು. 

ಅನಂತರ ಶಾಸನ ಸಭೆಯಲ್ಲಿ ಬೆಂಗಳೂರು ನಗರದ ಅಭಿವೃದ್ಧಿಯ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಇದೊಂದು ಸರಣಿಯ ಸಭೆಯಾಗಿದ್ದು, ಸರಣಿಯಲ್ಲಿ ಇದು ಮೊದಲನೆಯದು. ನಗರವನ್ನು ಯೋಜನಾ ಬದ್ಧ ಅಭಿವೃದ್ದಿ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ದಿಪಡಿಸುವುದು ಬಹಳ ಮುಖ್ಯವಾಗಿದೆ ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News