ಹಗರಣ ಸ್ವರೂಪ ಪಡೆಯುವ ಮುನ್ನ ಸರಕಾರ ಮಧ್ಯ ಪ್ರವೇಶಿಸಲಿ: ಡಾ.ಸುಧಾಕರ್

Update: 2021-11-28 16:59 GMT

ಬೆಂಗಳೂರು, ನ. 28: ಬೆಂಗಳೂರು ವಿವಿಯಲ್ಲಿ ಎರಡು ವರ್ಷಗಳಿಂದ ಒಂದೇ ಅಧಿಸೂಚನೆಗೆ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ವಿವಾದವು ಹಗರಣದ ಸ್ವರೂಪವನ್ನು ಪಡೆದುಕೊಳ್ಳುವ ಮುನ್ನ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ್ ಮಧ್ಯ ಪ್ರವೇಶಿಸಿ ವಿಧ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಡಾ.ಸುಧಾಕರ್ ಆಗ್ರಹಿಸಿದ್ದಾರೆ. 

ರವಿವಾರ ಜ್ಞಾನಭಾರತಿ ಆವರಣದಲ್ಲಿ ಮಾತನಾಡಿದ ಅವರು, ಬೆಂಗಳೂರು ವಿವಿಯು 2019ರ ಜೂನ್ ತಿಂಗಳಿನಲ್ಲಿ ಪಿಎಚ್‍ಡಿ ಪ್ರವೇಶ ಅದಿಸೂಚನೆಯನ್ನು ಹೊರಡಿಸಿತ್ತು. ಅಧಿಸೂಚನೆಯಂತೆ 2019ರ ಅಂತ್ಯಕ್ಕೆ ಪಿಎಚ್‍ಡಿ ಪ್ರವೇಶ ಮುಗಿಯಬೇಕಿತ್ತು. ವಿಪರ್ಯಾಸ ಎಂದರೆ 2021ರ ಅಂತ್ಯದ ವರೆಗೂ ಅದೇ ಅಧಿಸೂಚನೆಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದೆ. ವಿವಿಯು ಅಳವಡಿಸಿಕೊಂಡಿರುವ 2016ರ ಪಿಎಚ್‍ಡಿ ನಿಬಂಧನೆಗಳನ್ನು ಗಾಳಿಗೆ ತೂರಿ ಅನರ್ಹರಿಗೆ ಪಿಎಚ್‍ಡಿ ಪ್ರವೇಶವನ್ನು ನೀಡುವುದರ ಹಿಂದಿನ ರಹಸ್ಯವಾದರೂ ಏನು? ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ಪಿಎಚ್‍ಡಿ ವಿವಾದವು ಹಗರಣದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಎರಡನೇ ಸುತ್ತಿನಲ್ಲಿ ಪಿಎಚ್‍ಡಿಗೆ ಪ್ರವೇಶದವರಲ್ಲಿ ಬಹುತೇಕ ಅಭ್ಯರ್ಥಿಗಳು ಅನರ್ಹರಾಗಿದ್ದಾರೆ. ಅಲ್ಲದೆ, ಅವರಿಗೆ ಯಾವ ಪಿಎಚ್‍ಡಿ ನಿಬಂಧನೆಗಳ ಅನ್ವಯ ಪಿಎಚ್‍ಡಿ ಸೀಟುಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ವಿವಿಯು ಈಗಲೂ ಬಹಿರಂಗಪಡಿಸಲಿ ಎಂದ ಅವರು, ವಿವಿಯು ಅದನ್ನು ಬಹಿರಂಗಪಡಿಸಿದರೆ ಎಲ್ಲಾ ವಿಭಾಗಗಳಲ್ಲಿ ಪಿಎಚ್‍ಡಿಗೆ ಹಿಂಬಾಗಿಲಿನಿಂದ ಪ್ರವೇಶ ಪಡೆದ 100ಕ್ಕೂ ಹೆಚ್ಚು ಅನರ್ಹರು ಹೊರಗುಳಿಯುತ್ತಾರೆ ಎಂದು ತಿಳಿಸಿದರು.

ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಪ್ರತಿವರ್ಷ ತೆರುವಾದ ಪಿಎಚ್‍ಡಿ ಸೀಟುಗಳಿಗೆ ಅದೇ ವರ್ಷ ನೇಮಕ ಮಾಡಿಕೊಳ್ಳುತ್ತವೆ. ಆದರೆ ಬೆಂಗಳೂರು ವಿವಿಯು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದು ಹಂಪಿಯ ಕನ್ನಡ ವಿವಿಯಂತೆ ಗೊಂದಲದ ಗೂಡಾಗುವುದಕ್ಕಿಂತ ಮುನ್ನ ಉನ್ನತ ಶಿಕ್ಷಣ ಸಚಿವರು ಮಧ್ಯ ಪ್ರವೇಶಿಸಬೇಕು, ಇಲ್ಲವಾದಲ್ಲಿ ಇದು ಹಗರಣದ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News