ಬೆಂಗಳೂರಿನಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ

Update: 2021-11-28 17:22 GMT

ಬೆಂಗಳೂರು, ನ. 28: ಇಲ್ಲಿನ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದ ಆವರಣದಲ್ಲಿ ಸೋಮವಾರದಿಂದ(ನ.29) ಸತತ ಮೂರು ದಿನಗಳ ಕಾಲ ಐತಿಹಾಸಿಕ `ಕಡಲೆಕಾಯಿ ಪರಿಷೆ' ಜರುಗಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿ ಪರಿಷೆಗೆ ಅನುಮತಿ ನೀಡಿರಲಿಲ್ಲ. ಆದರೆ, ಈ ಬಾರಿ ಅನುಮತಿ ನೀಡಲಾಗಿದ್ದು, ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ (ನ.29) ಮೂರು ದಿನಗಳ ಕಾಲ ಜಾತ್ರೆ ನಡೆಯಲಿದೆ.

ಧಾರ್ಮಿಕ ದತ್ತಿ ಇಲಾಖೆ ಮತ್ತು ಬಿಬಿಎಂಪಿ ಕಡಲೆಕಾಯಿ ಪರಿಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಜತೆಗೆ, ಈ ಬಾರಿ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಯು ಕಳೆಗಟ್ಟಲಿದ್ದು, ಹಲವು ವರ್ಷಗಳ ಇತಿಹಾಸ ಹೊಂದಿರುವ ಕಡಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಮಂದಿ ಜಮಾವಣೆಗೊಳ್ಳಲಿದ್ದಾರೆ.

ಬೆಳಗಾವಿ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ರಾಜ್ಯದ ಹಲವು ಭಾಗಗಳಿಂದ  ಆಗಮಿಸುವ ವ್ಯಾಪಾರಿಗಳು ನಾಲ್ಕೈದು ದಿನಗಳ ಕಾಲ ಬೀಡುಬಿಟ್ಟು, ನಾನಾ ತಳಿಯ ಕಡಲೆಕಾಯಿ ಮಾರಾಟ ಮಾಡಲಿದ್ದಾರೆ. 

ಪರಿಷೆ ಇತಿಹಾಸ: ಬೆಂಗಳೂರು ನಗರ ಇಷ್ಟು ದೊಡ್ಡದಾಗಿ ಬೆಳೆದು ಮಹಾನಗರವಾಗುವ ಮೊದಲು ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ಶೇಂಗಾ ಬೆಳೆಯುತ್ತಿದ್ದರು. ಆದರೆ, ಶೇಂಗಾ ಕಟಾವಿಗೆ ಸಿದ್ಧವಾಗುವಾಗ ಬೆಳೆಯನ್ನು ಬಸವವೊಂದು ನಾಶಪಡಿಸುತ್ತಿತ್ತು. 

ರೈತರು ಒಂದು ದಿನ ಕಾದು ಬೆಳೆಯನ್ನು ರಕ್ಷಿಸಿಕೊಳ್ಳಲು ಬಸವನಿಗೆ ಹೊಡೆಯಲು ಮುಂದಾಗುತ್ತಾರೆ. ಆಗ ಅದು ಕಲ್ಲಾಗಿ ಹೋಯಿತು ಎಂದು ಇತಿಹಾಸ ಹೇಳುತ್ತದೆ. ಅಂದಿನಿಂದ ರೈತರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News