ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಜಾತಿವಾದ ನಿರ್ಮೂಲನಗೊಂಡಿಲ್ಲ: ಸುಪ್ರೀಂ ಕೋರ್ಟ್

Update: 2021-11-28 17:30 GMT

ಹೊಸದಿಲ್ಲಿ, ನ.28: ಜಾತಿ ಪ್ರೇರಿತ ಹಿಂಸಾಚಾರದ ಘಟನೆಗಳು ದೇಶಕ್ಕೆ ಸ್ವಾತಂತ್ರ ದೊರೆತು 75 ವರ್ಷಗಳಾಗಿದ್ದರೂ ಜಾತಿವಾದವು ನಿರ್ಮೂಲನಗೊಂಡಿಲ್ಲ ಎನ್ನುವುದನ್ನು ತೋರಿಸುತ್ತಿವೆ ಮತ್ತು ನಾಗರಿಕ ಸಮಾಜವು ಜಾತಿಯ ಹೆಸರಿನಲ್ಲಿ ನಡೆಯುವ ಘೋರ ಅಪರಾಧಗಳ ಬಗ್ಗೆ ‘ಬಲವಾದ ಅಸಮ್ಮತಿ’ಯೊಂದಿಗೆ ಪ್ರತಿಕ್ರಿಯಿಸಲು ಇದು ಸಕಾಲವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

1991ರ ಉತ್ತರ ಪ್ರದೇಶ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಸಲ್ಲಿಸಲಾಗಿ ದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯವು,ಮರ್ಯಾದೆಗೇಡು ಹತ್ಯೆಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಾನು ಈ ಮೊದಲು ಅಧಿಕಾರಿಗಳಿಗೆ ಹಲವಾರು ನಿರ್ದೇಶಗಳನ್ನು ಹೊರಡಿಸಿದ್ದೆ. ಇನ್ನಷ್ಟು ವಿಳಂಬಿಸದೆ ಆ ನಿರ್ದೇಶಗಳನ್ನು ಪಾಲಿಸಬೇಕು ಎಂದು ಹೇಳಿತು. ಈ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಕೊಲ್ಲಲ್ಲಟ್ಟಿದ್ದರು. ವಿಚಾರಣೆಯು ಕಳಂಕಿತವಾಗುವುದನ್ನು ಮತ್ತು ಸತ್ಯವು ಬಲಿಪಶುವಾಗುವುದನ್ನು ತಡೆಯುವಲ್ಲಿ ಸಾಕ್ಷಿಗಳ ರಕ್ಷಣೆಯಲ್ಲಿ ಸರಕಾರವು ಖಂಡಿತವಾಗಿಯೂ ಪಾತ್ರವನ್ನು ಹೊಂದಿದೆ. ಪ್ರಾರಂಭದಲ್ಲಿ ಕನಿಷ್ಠ ಪಕ್ಷ, ರಾಜಕೀಯ ಕೃಪಾಶ್ರಯವನ್ನು ಹೊಂದಿರುವ ಅಧಿಕಾರದಲ್ಲಿರುವವರು ಹಾಗೂ ಹಣ ಮತ್ತು ತೋಳ್ಬಲವನ್ನು ತೋರಿಸುವವರು ಒಳಗೊಂಡಿರುವ ಸೂಕ್ಷ್ಮ ಪ್ರಕರಣಗಳಲ್ಲಿ ಸರಕಾರವು ತನ್ನ ಪಾತ್ರವನ್ನು ನಿರ್ವಹಿಸಬಹುದಾಗಿದೆ ಎಂದೂ ನ್ಯಾ.ಎಲ್. ನಾಗೇಶ್ವರ ರಾವ್ ಅವರ ನೇತೃತ್ವದ ಪೀಠವು ಹೇಳಿತು. ಇಂದಿಗೂ ಅಸ್ತಿತ್ವದಲ್ಲಿರುವ ಜಾತಿ ಆಧಾರಿತ ಆಚರಣೆಗಳಿಂದಾಗಿ ಮತಾಂಧತೆಯು ಎಲ್ಲ ನಾಗರಿಕರಿಗೆ ಸಮಾನತೆಯ ಸಂವಿಧಾನದ ಉದ್ದೇಶಕ್ಕೆ ಅಡ್ಡಿಯಾಗುತ್ತದೆ ಎಂದು ನ್ಯಾಯಾಲಯವು ಹೇಳಿತು.

ಜಾತಿಬದ್ಧ ಸಾಮಾಜಿಕ ಕಟ್ಟುಪಾಡುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಇಬ್ಬರು ಯುವಕರು ಮತ್ತು ಓರ್ವ ಮಹಿಳೆಯ ಮೇಲೆ ಸುಮಾರು 12 ಗಂಟೆಗಳ ಕಾಲ ದೈಹಿಕ ಹಲ್ಲೆ ನಡೆಸಿ ಕೊಲ್ಲಲಾಗಿತ್ತು. ಜಾತಿ ಪ್ರೇರಿತ ಹಿಂಸಾಚಾರದ ಇಂತಹ ಘಟನೆಗಳು ದೇಶಕ್ಕೆ ಸ್ವಾತಂತ್ರ ದೊರಕಿ 75 ವರ್ಷಗಳಾಗಿದ್ದರೂ ಜಾತೀಯತೆಯು ತೊಲಗಿಲ್ಲ ಎನ್ನುವುದನ್ನು ತೋರಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಬಿ.ಆರ್.ಗವಾಯಿ ಅವರನ್ನೂ ಒಳಗೊಂಡಿದ್ದ ಪೀಠವು ಹೇಳಿತು.

ಪ್ರಕರಣದಲ್ಲಿ 23 ಜನರನ್ನು ದೋಷಿಗಳೆಂದು ಘೋಷಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯವು,ಮೂವರನ್ನು ಅವರ ಗುರುತಿನ ಅಸ್ಪಷ್ಟತೆಯ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತು.

ಸಾಕ್ಷಿಗಳಿಗೆ ರಕ್ಷಣೆಯ ಅಂಶವನ್ನು ಪ್ರಸ್ತಾಪಿಸಿದ ಪೀಠವು, ಪ್ರಕರಣದಲ್ಲಿ 12 ಪ್ರಾಸಿಕ್ಯೂಷನ್ ಸಾಕ್ಷಿಗಳು ತಿರುಗಿಬಿದ್ದಿದ್ದನ್ನು ಬೆಟ್ಟು ಮಾಡಿತು. ಸಾಕ್ಷಿಗಳು ತಿರುಗಿಬಿದ್ದಿದ್ದರೂ ಅವರು ಸಹಜ ಮತ್ತು ಸ್ವತಂತ್ರ ಸಾಕ್ಷಿಗಳಾಗಿದ್ದರೆ ಮತ್ತು ಆರೋಪಿಯನ್ನು ಸುಳ್ಳೇ ಸಿಲುಕಿಸಲು ಅವರಿಗೆ ಯಾವುದೇ ಕಾರಣವಿಲ್ಲದಿದ್ದರೆ ಅವರ ಸಾಕ್ಷಗಳನ್ನು ಸ್ವೀಕರಿಸಬಹುದು ಎಂದು ಅದು ಹೇಳಿತು.

ಸರಕಾರವು ಸಾಕ್ಷಿಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸದಿರುವುದು ಅವರು ಪ್ರತಿಕೂಲ ಸಾಕ್ಷ್ಯ ನುಡಿಯಲು ಮುಖ್ಯ ಕಾರಣಗಳಲ್ಲೊಂದಾಗಿದೆ. ವಿಶೇಷವಾಗಿ ಆರೋಪಿಗಳು ಪ್ರಭಾವಿ ವ್ಯಕ್ತಿಗಳಾಗಿರುವ ಮತ್ತು ಘೋರ ಅಪರಾಧಗಳಿಗಾಗಿ ವಿಚಾರಣೆ ಎದುರಿಸುತ್ತಿರುವ ಮತ್ತು ಅವರು ಸಾಕ್ಷಿಗಳಲ್ಲಿ ಭೀತಿ ಮೂಡಿಸಲು ಪ್ರಯತ್ನಿಸುವ ಪ್ರಕರಣಗಳಲ್ಲಿ ಇದು ಕಟು ವಾಸ್ತವಾಗಿದೆ ಎಂದು ಪೀಠವು ಹೇಳಿತು.

ತನ್ನ ಪ್ರಜೆಗಳ ರಕ್ಷಕನಾಗಿ ಸರಕಾರವು ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಯು ತಾನು ವಿರುದ್ಧವಾಗಿ ಸಾಕ್ಷಿ ನುಡಿಯುತ್ತಿರುವವರ ಭಯವಿಲ್ಲದೆ ಸತ್ಯವನ್ನು ಸುರಕ್ಷಿತವಾಗಿ ದಾಖಲಿಸುವಂತೆ ನೋಡಿಕೊಳ್ಳಬೇಕು ಎಂದು ಪೀಠವು ತಿಳಿಸಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಕಾರ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಜಾತೀಯತೆಯನ್ನು ತೊಲಗಿಸಲು ಅಂತರ ಜಾತಿ ವಿವಾಹವು ಒಂದು ಪರಿಹಾರವಾಗಿದೆ ಎಂದು ಬೆಟ್ಟು ಮಾಡಿದ ಪೀಠವು, ಸಮಾಜದ ಎಲ್ಲ ವರ್ಗಗಳಿಗೆ,ವಿಶೇಷವಾಗಿ ದಮನಕ್ಕೊಳಗಾದ ವರ್ಗಗಳಿಗೆ ನ್ಯಾಯ ಮತ್ತು ಸಮಾನತೆಯನ್ನು ಖಚಿತಪಡಿಸುವ ಅವರ ದೂರದೃಷ್ಟಿಯು ಸಂವಿಧಾನದ ಪೀಠಿಕೆಯಲ್ಲಿ ಉತ್ತಮವಾಗಿ ಪ್ರತಿಪಾದಿಸಲ್ಪಟ್ಟಿದೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News