ಬದುಕಿನುದ್ದಕ್ಕೂ ವರ್ಣ ತಾರತಮ್ಯ ಎದುರಿಸುತ್ತಾ ಬಂದಿದ್ದೇನೆ : ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್

Update: 2021-11-29 08:49 GMT
ಲಕ್ಷ್ಮಣ್ ಶಿವರಾಮಕೃಷ್ಣನ್

ಚೆನ್ನೈ, ನ. 28: ನನ್ನ ಚರ್ಮದ ಬಣ್ಣದಿಂದಾಗಿ ಬದುಕಿನುದ್ದಕ್ಕೂ ಅವಮಾನಗಳನ್ನು ಎದುರಿಸುತ್ತಾ ಬಂದಿದ್ದೇನೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಹೇಳಿದ್ದಾರೆ.

‘‘ನನ್ನ ವಿರುದ್ಧ ಜೀವಮಾನವಿಡೀ ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ಮಾಡಲಾಗಿದೆ ಹಾಗೂ ಟೀಕಿಸಲಾಗಿದೆ. ಹಾಗಾಗಿ, ಈಗ ನನಗೆ ಆ ಬಗ್ಗೆ ಏನೂ ಅನಿಸುವುದಿಲ್ಲ. ದುರದೃಷ್ಟವಶಾತ್ ನನ್ನನ್ನು ನನ್ನದೇ ದೇಶದಲ್ಲಿ ಅವಮಾನಿಸಲಾಗಿದೆ’’ ಎಂಬುದಾಗಿ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಅವರು ಭಾರತದ ಪರವಾಗಿ 9 ಟೆಸ್ಟ್‌ಗಳು ಮತ್ತು 16 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

ಹಿಂದೆಯೂ, ಹಲವು ಮಂದಿ ಭಾರತೀಯ ಕ್ರಿಕೆಟಿಗರು ತಮ್ಮ ವಿರುದ್ಧ ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ಮಾಡಲಾಗಿದೆ ಎಂಬುದಾಗಿ ಆರೋಪಿಸಿದ್ದಾರೆ. 2017ರ ಆಗಸ್ಟ್‌ನಲ್ಲಿ ಭಾರತ ಮತ್ತು ತಮಿಳುನಾಡು ತಂಡಗಳ ಮಾಜಿ ಆರಂಭಿಕ ಆಟಗಾರ ಅಭಿನವ್ ಮುಕುಂದ್ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಎತ್ತಿದ್ದರು.

‘‘ನಾನು ಇದನ್ನು ಇಂದು ಬರೆಯುತ್ತಿರುವುದು ಸಹಾನುಭೂತಿ ಪಡೆಯಲು ಅಥವಾ ಗಮನ ಸೆಳೆಯಲು ಅಲ್ಲ. ನಾನು ಆಕ್ರೋಶ ಹೊಂದಿರುವ ವಿಷಯದಲ್ಲಿ ಜನರ ಮನೋಭಾವ ಬದಲಾಗಬಹುದು ಎನ್ನುವ ಆಶೆಯಿಂದ. ಹದಿನೈದನೇ ವರ್ಷದ ಬಳಿಕ ನಾನು ಭಾರತದ ಒಳಗೆ ಮತ್ತು ಹೊರಗೆ ವ್ಯಾಪಕವಾಗಿ ಓಡಾಡಿದ್ದೇನೆ. ನನ್ನ ಚರ್ಮದ ಬಣ್ಣದ ಬಗ್ಗೆ ಜನರು ಹೊಂದಿರುವ ಗೀಳನ್ನು ಈಗಲೂ ನನಗೆ ಅರ್ಥ ಮಾಡಿಕೊಳ್ಳಲು ಆಗಿಲ್ಲ’’ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಮುಕುಂದ್ ಭಾರತದ ಪರವಾಗಿ 7 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಮೂರು ವರ್ಷಗಳ ಬಳಿಕ, 2020ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಕೂಡ ಜನಾಂಗೀಯ ತಾರತಮ್ಯದ ತನ್ನ ಅನುಭವವನ್ನು ಹೊರಹಾಕಿದ್ದರು.

ಮುಕುಂದ ಅನುಭವವು ನನ್ನ ಆಡುವ ದಿನಗಳಲ್ಲಿ ನಾನು ಎದುರಿಸುತ್ತಿದ್ದ ಜನಾಂಗೀಯ ನಿಂದನೆಗಳನ್ನು ನೆನಪಿಸಿತು. ಅದಕ್ಕೆ ಒಬ್ಬ ಭಾರತೀಯ ಕ್ರಿಕೆಟ್ ದಿಗ್ಗಜ ಮಾತ್ರ ಸಾಕ್ಷಿಯಾಗಿದ್ದರು. ಆ ಘಟನೆಯು ನನ್ನನ್ನು ಮತ್ತಷ್ಟು ಬಲಿಷ್ಠನಾಗಿಸಿತು ಹಾಗೂ ಭಾರತ ಮತ್ತು ಕರ್ನಾಟಕದ ಪರವಾಗಿ ಆಡುವುದರಿಂದ ನನ್ನನ್ನು ತಡೆಯಲಿಲ್ಲ’’ ಎಂಬುದಾಗಿ ದೊಡ್ಡ ಗಣೇಶ್ ಟ್ವಿಟರ್‌ನಲ್ಲಿ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News