ಖ್ಯಾತ ನೃತ್ಯ ಸಂಯೋಜಕ ಶಿವಕುಮಾರ್ ನಿಧನ

Update: 2021-11-29 02:00 GMT
(ಫೋಟೊ : Twitter)

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನೃತ್ಯ ಸಂಯೋಜಕ ಶಿವಕುಮಾರ್ ಅವರು 72ನೆ ವಯಸ್ಸಿನಲ್ಲಿ ಕೋವಿಡ್ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ನಿಧನರಾದರು.

ನಾಲ್ಕು ದಶಕಗಳ ವರ್ಣರಂಜಿತ ವೃತ್ತಿಜೀವನದಲ್ಲಿ ಅವರು ಟಾಲಿವುಡ್‌ನ ಹಲವಾರು ಆಕರ್ಷಕ ಮತ್ತು ಜನಪ್ರಿಯ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು.

1970ರ ದಶಕದಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ಅವರು, ಚಿರಂಜೀವಿ, ವಿಜಯಕಾಂತ್ ಮತ್ತು ಶರತ್‌ ಕುಮಾರ್ ಸೇರಿದಂತೆ ಹಲವು ಖ್ಯಾತ ನಟರ ಸೂಪರ್‌ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದ್ದರು.

1948ರ ಡಿಸೆಂಬರ್ 7ರಂದು ಚೆನ್ನೈನಲ್ಲಿ ಜನಿಸಿದ ಅವರು, ಸಹಾಯಕ ನೃತ್ಯ ಸಂಯೋಜಕರಾಗಿ ಚಿತ್ರರಂಗ ಪ್ರವೇಶಿಸಿದರು. 1990ರ ದಶಕದಲ್ಲಿ ’ಕುರುವಿಕೂಡು’ ಸಾಥೈ ಇಲ್ಲಾಥ ಪಂಬರಂ, ಮಾಮ್ ವಾಸನೈ ಮತ್ತಿತರ ಸೂಪರ್‌ ಹಿಟ್ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದರು. 1983ರ ಬ್ಲಾಕ್‌ ಬ್ಲಸ್ಟರ್ ’ಕೈದಿ’ ಚಿತ್ರದ ಮೂಲಕ ನೃತ್ಯ ನಿರ್ದೇಶಕರಾಗಿ ಬಡ್ತಿ ಪಡೆದರು. ಆ ಬಳಿಕ ಎರಡು ದಶಕಗಳ ಕಾಲ ಟಾಲಿವುಡ್ ಚಿತ್ರರಂಗವನ್ನು ಆಳಿದರು.

2011ರಲ್ಲಿ ಅವರು ಎಸ್.ಎಸ್.ರಾಮೋಜಿ ನಿರ್ದೇಶನದ ರಾಮ್ ಚರಣ್ ಅವರ ’ಮಗಧೀರ’ ಚಿತ್ರದ ’ಧೀರ ಧೀರ’ ಹಾಡಿನ ನೃತ್ಯ ಸಂಯೋಜನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು. 800ಕ್ಕೂ ಹೆಚ್ಚು ಹಾಡುಗಳಿಗೆ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಅವರು ದೇಶಾದ್ಯಂತ ಮತ್ತು ಜಾಗತಿಕ ಮಟ್ಟದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಹಲವು ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಹಲವು ಚಿತ್ರಗಳಲ್ಲೂ ಕಾಣಿಸಿಕೊಂಡಿರುವ ಅವರು, ಜನಪ್ರಿಯ ಡ್ಯಾನ್ಸ್ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ.

ಎಸ್‌ಎಸ್ ರಾಜಮೌಳಿ, ಐಶ್ವರ್ಯ ರಾಜೇಶ್, ಸೋನು ಸೂದ್ ಸೇರಿದಂತೆ ಚಿತ್ರರಂಗದ ಹಲವಾರು ಮಂದಿ ಗಣ್ಯರು, ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News