ಪ್ರಧಾನಿ ಹೇಳಿಕೆಗಳಿಗೆ ಆಕ್ಷೇಪಿಸಿ ಬಹಿರಂಗ ಪತ್ರ ಬರೆದ ಮಾಜಿ ಐಎಎಸ್ ಅಧಿಕಾರಿಗಳ ತಂಡ

Update: 2021-11-29 07:23 GMT
ಪ್ರಧಾನಿ ನರೇಂದ್ರ ಮೋದಿ (File Photo: PTI)

ಹೊಸದಿಲ್ಲಿ: ದೇಶದ ನಾಗರಿಕ ಸಮಾಜದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆಲ ಉನ್ನತ ಅಧಿಕಾರಿಗಳು ಇತ್ತೀಚೆಗೆ ನೀಡಿರುವ ಹೇಳಿಕೆಗಳನ್ನು ಖಂಡಿಸಿ 102 ಮಂದಿ ಮಾಜಿ ಐಎಎಸ್ ಅಧಿಕಾರಿಗಳು ರವಿವಾರ ಬಹಿರಂಗ ಪತ್ರ ಬರೆದಿದ್ದಾರೆ ಎಂದು scroll.in ವರದಿ ಮಾಡಿದೆ.

ಒಂದು ಉದಾಹರಣೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯಿದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರನ್ನು 'ಆಂದೋಲನ್‌ಜೀವಿ'ಗಳು ಎಂದಿದ್ದರು. ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಪ್ರಧಾನಿ "ಆಂದೋಲನಜೀವಿಗಳು ಪ್ಯಾರಾಸೈಟ್‌ಗಳಂತೆ'' ಎಂದಿದ್ದರು.

"ಚುನಾವಣೆಗಳ ಕಾರಣದಿಂದ ಪ್ರಧಾನಿ ಅನಿವಾರ್ಯವಾಗಿ ಕಾನೂನುಗಳನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿರಬಹುದು, ಆದರೆ ಅದಾಗಲೇ ದೇಶದ ಸಮಾಜಕ್ಕೆ ಅದು ಉಂಟು ಮಾಡಿದ ಹಾನಿ ಸರಿಪಡಿಸಲು ಸಾಧ್ಯವಿಲ್ಲ,'' ಎಂದು ಪತ್ರದಲ್ಲಿ ಹೇಳಲಾಗಿದೆ.

"ಅಂತರಾಷ್ಟ್ರೀಯ ಶಕ್ತಿಗಳಿಗೆ ಮಣಿದು ಭಾರತದ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಹೊರಿಸುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ,'' ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸ್ಥಾಪನಾ ದಿನದ ಸಂದರ್ಭ ಅದರ ಅಧ್ಯಕ್ಷ ಅರುಣ್ ಮಿಶ್ರಾ  ಹೇಳಿರುವುದು ಹಾಗೂ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಇತ್ತೀಚೆಗೆ ಮಾತನಾಡುತ್ತಾ "ಜಮ್ಮು ಕಾಶ್ಮೀರದ ಜನರು ಈಗ ಉಗ್ರರನ್ನು ಹತ್ಯೆಗೈಯ್ಯಲು ಸಿದ್ಧರಿದ್ದಾರೆ ಹಾಗೂ ಇದು ಒಂದು ಉತ್ತಮ ಬೆಳವಣಿಗೆ,'' ಎಂದು ಹೇಳಿರುವುದಕ್ಕೆ ಪತ್ರದಲ್ಲಿ ಆಕ್ಷೇಪ ಸೂಚಿಸಲಾಗಿದೆ. ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು "ದೇಶದ ಹಿತಾಸಕ್ತಿಗಳಿಗೆ ಧಕ್ಕೆ ತರುವ ಹಾಗೆ ತಿರುಚಬಹುದಾದ ನಾಗರಿಕ ಸಮಾಜ ಯುದ್ಧದ ಹೊಸ ಗಡಿಯಾಗಿದೆ.'' ಎಂದು ಹೇಳಿರುವುದಕ್ಕೆ ಕೂಡ ಪತ್ರದಲ್ಲಿ ಆಕ್ಷೇಪಿಸಲಾಗಿದೆಯ್ಲಲದೆ ನಾಗರಿಕ ಸಮಾಜವನ್ನು ಈಗ ಉಗ್ರರು ಹಾಗೂ ನುಸುಳುಕೋರರ ಪಟ್ಟಿಯಲ್ಲಿ ಸೇರಿಸಿರುವಂತೆ ತೋರುತ್ತದೆ,'' ಎಂದು ಬರೆದಿದೆ.

ಕಾನ್‌ಸ್ಟಿಟ್ಯೂಷನಲ್ ಕಾಂಡಕ್ಟ್ ಗ್ರೂಪ್ ಎಂಬ ಹೆಸರಿನಲ್ಲಿ ಬರೆಯಲಾಗಿರುವ ಈ ಪತ್ರಕ್ಕೆ ಮಾಜಿ ಅಧಿಕಾರಿಗಳಾದ ಅನಿತಾ ಅಗ್ನಿಹೋತ್ರಿ, ಗುರ್ಜಿತ್ ಸಿಂಗ್ ಚೀಮಾ, ಎ ಎಸ್ ದುಲತ್, ಕೆ ಪಿ ಫೇಬಿಯನ್, ವಜಾಹತ್ ಹಬೀಬುಲ್ಲಾ, ಹರ್ಷ ಮಂದರ್, ಮೀರಾ ಪಾಂಡೆ ಮತ್ತಿತರರು ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News