ವಿಟ್ಲ, ಕೋಟೆಕಾರ್ ಪ.ಪಂ. ಸಹಿತ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಘೋಷಣೆ

Update: 2021-11-29 18:44 GMT

ಬೆಂಗಳೂರು, ನ.29: ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕವನ್ನು ರಾಜ್ಯ ಚುನಾವಣೆ ಆಯೋಗ ಸೋಮವಾರ ಪ್ರಕಟಿಸಿದೆ.

ದ.ಕ. ಜಿಲ್ಲೆಯ ವಿಟ್ಲ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯತ್, ಉಡುಪಿ ಜಿಲ್ಲೆಯ ಕಾಪು ಪುರಸಭೆ ಸೇರಿದಂತೆ ಅವಧಿ ಮುಗಿದ 34 ಪಟ್ಟಣ ಪಂಚಾಯತ್, 19 ಪುರಸಭೆ ಹಾಗೂ 5 ನಗರಸಭೆಗಳಿಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.

ಈ ಬಗ್ಗೆ ಡಿ.8ರಂದು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಡಿ.15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ.18 ಕೊನೆಯ ದಿನವಾಗಿರುತ್ತದೆ. ಡಿ.27ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಅಗತ್ಯಬಿದ್ದಲ್ಲಿ ಡಿ.29ರಂದು ಮರು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಡಿ.30ರಂದು ಡಿ.30ರಂದು ಬೆಳಗ್ಗೆ 8ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣೆ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.

ಡಿ.8ರಿಂದ ನೀತಿ ಸಂಹಿತೆ ಜಾರಿ: ಚುನಾವಣೆ ನಡೆಯುತ್ತಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡಿ.8ರಿಂದ ಡಿ.30ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ವೆಚ್ಚದ ಮಿತಿ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಗರಸಭೆಗಳಲ್ಲಿ ತಲಾ 2 ಲಕ್ಷ ರೂ., ಪುರಸಭೆಗಳಲ್ಲಿ 1.5 ಲಕ್ಷ ರೂ. ಮತ್ತು ಪಟ್ಟಣ ಪಂಚಾಯತ್ ಗಳಲ್ಲಿ 1 ಲಕ್ಷ ರೂ. ವೆಚ್ಚದ ಮಿತಿ ನಿಗದಿಪಡಿಸಲಾಗಿದೆ.

57 ಗ್ರಾಮ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆ

ರಾಜ್ಯ ಚುನಾವಣಾ ಆಯೋಗವು 2021ರ ಜೂನ್ ತಿಂಗಳಿನಿಂದ 2022ರ ಮಾರ್ಚ್ ತಿಂಗಳವರೆಗೆ ಅವಧಿ ಮುಕ್ತಾಯವಾಗುವ 44 ಗ್ರಾಮ ಪಂಚಾಯತ್, ನ್ಯಾಯಾಲಯ ಪ್ರಕರಣ, ಇತರೆ ಕಾರಣಗಳಿಂದ ಚುನಾವಣೆ ನಡೆಯದೆ ಬಾಕಿ ಇದ್ದ 13 ಗ್ರಾಮ ಪಂಚಾಯತ್ ಗಳು ಒಟ್ಟು 57 ಗ್ರಾಮ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ, ಖಾಲಿ ಉಳಿದಿರುವ 386 ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಿ ಆದೇಶಿಸಿದೆ.

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಡಿ.13ರಂದು ಹೊರಡಿಸಲಿದ್ದು, ಡಿ.17ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಡಿ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.20ರಂದು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ಅವಕಾಶ ನೀಡಲಾಗಿದೆ. ಡಿ.27ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯಕವಿದ್ದರೆ ಡಿ.29ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ನಡೆಸಬಹುದು. ಡಿ.30ರಂದು ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ನಡೆಯಲಿದ್ದು, ಅಂದೆ ಫಲಿತಾಂಶ ಪ್ರಕಟಿಸಲಾಗುವುದು. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿ.13 ರಿಂದ 30ರವರೆಗೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಅವಧಿ ಮುಕ್ತಾಯವಾಗುವ ಗ್ರಾಮ  ಪಂಚಾಯತ್ ಗಳು: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಬೆಟ್ಟಹಲಸೂರು, ಬಾಗಲೂರು, ಸಾತನೂರು ಗ್ರಾಮ ಪಂಚಾಯಿತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ, ದರ್ಗಾಜೋಗಿಹಳ್ಳಿ, ಚನ್ನರಾಯಪಟ್ಟಣ, ನಲ್ಲೂರು ಗ್ರಾಮ ಪಂಚಾಯಿತಿ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಗ್ಗೀಕುಪ್ಪೆ ಹಾಗೂ ಬೆಳಗುಂಬ ಗ್ರಾಮ ಪಂಚಾಯಿತಿ.

ಶಿವಮೊಗ್ಗ ತಾಲೂಕಿನ ಪುರದಾಳು, ಕುಂಸಿ, ಶಿಕಾರಿಪುರ ತಾಲೂಕಿನ ಹಾರೋಗೊಪ್ಪ, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು, ಹಾಸನ ತಾಲೂಕಿನ ಅಂಬುಗ, ಅಂಕಪುರ, ಚನ್ನಂಗಿಹಳ್ಳಿ, ಕಟ್ಟಾಯ, ಆಲೂರು ತಾಲೂಕಿನ ಹಂಚೂರು, ಅರಸೀಕೆರೆ ತಾಲೂಕಿನ ಬಾಣಾವರ, ಅರಕಲಗೂಡು ತಾಲೂಕಿನ ಕೊಣನೂರು, ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಗ್ರಾಮ ಪಂಚಾಯಿತಿ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ, ಮೂಡಿಗೆರೆ ತಾಲೂಕಿನ ಬಣಕಲ್, ತರುವೆ, ಬೆಳಗಾವಿ ತಾಲೂಕಿನ ಬಿಜಗರ್ಣಿ, ಬೆಳವಟ್ಟಿ, ಅಥಣಿ ತಾಲೂಕಿನ ಸವದಿ, ರಾಯಭಾಗ ತಾಲೂಕಿನ ಸಿದ್ದಾಪೂರ, ಯಲ್ಪಾರಟ್ಟಿ, ಯಡ್ರಂವ, ರಾಮದುರ್ಗ ತಾಲೂಕಿನ ತುರನೂರ, ಹಲಗತ್ತಿ, ಒಬಳಾಪೂರ.

ಧಾರವಾಡ ತಾಲೂಕಿನ ಮಾರಡಗಿ, ನವಲಗುಂದ ತಾಲೂಕಿನ ಕಾಲವಾಡ, ಅಣ್ಣೇಗೇರಿ ತಾಲೂಕಿನ ಸಾಸ್ವಿಹಳ್ಳಿ, ಕಲಘಟಗಿ ತಾಲೂಕಿನ ಬೇಗೂರ, ಕುಂದಗೋಳ ತಾಲೂಕಿನ ಮಳಲಿ, ಪಶುಪತಿಹಾಳ, ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಡೊಣಗಾಂವ, ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಗೋರ್ಟಾ(ಬಿ), ಹುಲಸೂರು ಹಾಗೂ ತೊಗಲೂರು ಗ್ರಾಮ ಪಂಚಾಯಿತಿಯ ಒಟ್ಟು 633 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಸದಸ್ಯರು ಆಯ್ಕೆಯಾಗದ ಪೂರ್ಣ ಗ್ರಾಮ ಪಂಚಾಯಿತಿಗಳು: 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಂಕಸಂದ್ರ, ತಿಪಟೂರು ತಾಲೂಕಿನ ಹೊನ್ನವಳ್ಳಿ, ಚಿಕ್ಕಮಗಳೂರು ತಾಲೂಕಿನ ಮೇಲಿನಹುಲುವತ್ತಿ, ತರೀಕೆರೆ ತಾಲೂಕಿನ ಕೆಂಚಿಕೊಪ್ಪ, ಜಮಖಂಡಿ ತಾಲೂಕಿನ ಸಾವಳಿಗಿ, ದಾವಣಗೆರೆ ತಾಲೂಕಿನ ಮಾಯಕೊಂಡ, ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಪಟ್ಟಣ, ಸಿಂಧಗಿ ತಾಲೂಕಿನ ಬಂದಾಳ, ಕನ್ನೊಳ್ಳಿ, ದೇವದುರ್ಗ ತಾಲೂಕಿನ ಜಾಲಹಳ್ಳಿ, ಚಿಂಚೋಡಿ ಹಾಗೂ ಕರಡಿಗುಡ್ಡ ಗ್ರಾಮ ಪಂಚಾಯಿತಿಯ ಒಟ್ಟು 245 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಇದಲ್ಲದೆ, 2021ನೆ ಸಾಲಿನಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಒಟ್ಟು 386 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News