ಬೆಂಗಳೂರು: 15 ತಿಂಗಳು ಶವಾಗಾರದಲ್ಲೇ ಬಾಕಿಯಾದ ಕೊರೋನದಿಂದ ಸಾವನ್ನಪ್ಪಿದ ಇಬ್ಬರ ಮೃತದೇಹ!

Update: 2021-11-29 11:35 GMT
ಸಾಂದರ್ಭಿಕ ಚಿತ್ರ (Source: PTI)

ಬೆಂಗಳೂರು, ನ.29: ಕೋವಿಡ್ ಮೊದಲ ಅಲೆಯ ಸಂದರ್ಭ ಸೋಂಕಿಗೊಳಗಾಗಿ ಮೃತಪಟ್ಟ ಇಬ್ಬರ ಮೃತದೇಹಗಳು 15 ತಿಂಗಳುಗಳ ಕಾಲ ಅಂತ್ಯ ಸಂಸ್ಕಾರವನ್ನು ಕಾಣದೆ ಶವಾಗಾರದ ಶೈತ್ಯಾಗಾರದಲ್ಲೇ ಉಳಿದ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ವರದಿಯಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಕಾರ್ಮಿಕ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

 ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಚಾಮರಾಜಪೇಟೆಯ ದುರ್ಗಾ(40) ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು (35) ಎಂಬವರು ಕೋವಿಡ್ ಸೋಂಕಿನಿಂದ 2020ರ ಜುಲೈ ತಿಂಗಳಲ್ಲಿ ಮೃತಪಟ್ಟಿದ್ದರು. ಈ ವೇಳೆ ಕೋವಿಡ್ ನಿಂದ ಮೃತಪಟ್ಟವರ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡದೆ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಿ ಸರಕಾರದ ವತಿಯಿಂದಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಅದರಂತೆ ದುರ್ಗಾ ಮತ್ತು ಮುನಿರಾಜು ಅವರ ಮೃತದೇಹಗಳನ್ನು ಅಂತ್ಯಸಂಸ್ಕಾರದ ಉದ್ದೇಶದಿಂದ ರಾಜಾಜಿ ನಗರದ ಇಎಸ್‌ಐ ಆಸ್ಪತ್ರೆಯ ಶವಾಗಾರದ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಆದರೆ ಈ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲೇ ಇಲ್ಲ. ಅಲ್ಲದೆ ಈ ಎರಡು ಮೃತದೇಹಗಳು ಶವಾಗಾರದಲ್ಲೇ ಉಳಿದಿದ್ದು, 15 ತಿಂಗಳ ಬಳಿಕ ಇದೀಗ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಎರಡು ದಿನಗಳ ಹಿಂದೆ ಹೊರತೆಗೆಯಲಾಗಿದ್ದು, ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಹೊಸ ಶವಾಗಾರ‌ ನಿರ್ಮಾಣದ ಬಳಿಕ ಹಳೆ ಶವಾಗಾರದ ಬಳಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆ ಕಟ್ಟಡದಲ್ಲಿ ಎರಡು ಮೃತದೇಹಗಳನ್ನು ಇಟ್ಟಿರುವುದನ್ನೇ ಸಿಬ್ಬಂದಿ ಮರೆತಿದ್ದೇ ಎಡವಟ್ಟಿಗೆ ಕಾರಣ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಹಳೆ ಶವಾಗಾರವನ್ನು ಸ್ವಚ್ಛ ಮಾಡಲು ಹೋದಾಗ ದುರ್ನಾತ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿಂದೆ ಕೋವಿಡ್ ಗೆ ಬಲಿಯಾದವರ ಮೃತದೇಹಗಳನ್ನು ಬಿಬಿಎಂಪಿ ವತಿಯಿಂದಲೇ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿತ್ತು. ಅದೇರೀತಿ ದುರ್ಗಾ ಮತ್ತು ಮುನಿರಾಜು ಅವರ ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ಬಿಬಿಎಂಪಿ ವತಿಯಿಂದ ಮೃತರ ಕುಟುಂಸ್ಥರಿಗೆ ಡೆತ್ ಸರ್ಟಿಫಿಕೆಟ್ ನೀಡಲಾಗಿತ್ತು. ಆದರೆ ಇದೀಗ ಆಸ್ಪತ್ರೆಯ ಮತ್ತು ಬಿಬಿಎಂಪಿ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬೆಳಕಿಗೆ ಬಂದಿದ್ದು, ಮೃತರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉನ್ನತ ತನಿಖೆಗೆ ಕಾರ್ಮಿಕ ಸಚಿವರಿ​ಗೆ ಸುರೇಶ್ ಕುಮಾರ್ ಪತ್ರ
ಇನ್ನು ಈ ಘಟನೆ ಸಂಬಂಧ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್​ಗೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ನಿರ್ಲಕ್ಷ್ಯದಲ್ಲಿ ಬಿಬಿಎಂಪಿ ಮತ್ತು ಇ.ಎಸ್.ಐ. ಆಸ್ಪತ್ರ ಎರಡರ ಪಾತ್ರವೂ ಬಹಳ ಗಂಭೀರವಾದದ್ದು, ಈ ಕುರಿತು ತಾವು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿ ನಿರ್ದಿಷ್ಟ ವರದಿಯನ್ನು  ತರಿಸಿಕೊಂಡು ಈ ಅಮಾನವೀಯ ಕೃತ್ಯಕ್ಕೆ ಯಾರು ಕಾರಣರು ಎಂಬುದರ ಮೇಲೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.

ಈ ರೀತಿಯ ಪ್ರಸಂಗ ಎಲ್ಲಿಯೂ ಜರುಗಬಾರದು. ಕೋವಿಡ್-19 ಪರಿಸ್ಥಿತಿಯಲ್ಲಿ ಬೇರೆ ಬೇರೆ ರೀತಿಯ ಕರುಳು ಹಿಂಡುವ ಘಟನೆಗಳನ್ನು ನಾವು ಕೇಳಿದ್ದೆವು. ಆದರೆ ಇ.ಎಸ್.ಐ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಅತ್ಯಂತ ದುರ್ದೈವ. ಬೇಜವಾಬ್ದಾರಿತನ ಮತ್ತು ಅಮಾನವೀಯ ವರ್ತನೆಯ ಪರಾಕಾಷ್ಠೆ. ತಾವು ಈ ಕುರಿತು ಕೂಡಲೇ ಆಗತ್ಯ ಕ್ರಮ ಜರುಗಿಸಿ ತಪ್ಪಿತಸ್ಥರ ಮೇಲೆ ಅಗತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News