ಬೆಂಗಳೂರು: ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ; ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಿ ಧರಣಿ

Update: 2021-11-29 12:20 GMT

ಬೆಂಗಳೂರು, ನ.29: ಇಲ್ಲಿನ ಬಸವನಗುಡಿಯ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಠೇವಣಿದಾರರು ಬೃಹತ್ ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣೆ ವೇದಿಕೆ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರಕರಣದಲ್ಲಿ ಆರ್‍ಬಿಐ ಮಧ್ಯಪ್ರವೇಶಿಸಿ, ವಂಚನೆಗೆ ಒಳಗಾದವರಿಗೆ ನ್ಯಾಯ ಕೊಡಿಸಬೇಕು. ಪ್ರಕರಣವನ್ನು ರಾಜ್ಯ ಸರಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಾ.ಶಂಕರ್‍ಗುಹಾ ದ್ವಾರಕಾನಾಥ್ ಬೆಳ್ಳೂರು, ವಂಚನೆಯ ವಿರುದ್ಧ ಒಂದು ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯ ಸರಕಾರ ಕಂಡೂ ಕಾಣದಂತೆ ನಡೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಕರಣದ ಇತ್ಯರ್ಥಕ್ಕಾಗಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದ ಅವರು, ದುಡ್ಡು ತಿಂದಿರುವ ಕಳ್ಳರು ನೆಮ್ಮದಿಯಿಂದ ಇದ್ದಾರೆ. ಈಗಾಗಲೇ ಹಣ ಕಳೆದುಕೊಂಡು ಮೂವರು ಸಾವನ್ನಪ್ಪಿದ್ದಾರೆ. ಹಣ ಕೊಳ್ಳೆ ಹೊಡೆದ ಕಳ್ಳರನ್ನು ಪ್ರಭಾವಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬ್ಯಾಂಕ್ ಹಗರಣ ಬೆಳಕಿಗೆ ಬಂದು 2 ವರ್ಷಗಳಾಗಿವೆ. ಈವರೆಗೂ ಹಗರಣದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿಲ್ಲ. ಶಾಸಕ ರವಿ ಸುಬ್ರಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಆರೋಪಿಗಳ ಪರವಾಗಿದ್ದಾರೆ ಎಂಬ ಆರೋಪವಿದೆ. ಜನಪ್ರತಿನಿಧಿಗಳು ಹಗರಣದ ಬಗ್ಗೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News