ಬೆಂಗಳೂರು: ಕೋವಿಡ್ ಅಪಾಯ ಭತ್ತೆ ಪಾವತಿ ವಿಳಂಬ; ಒಪಿಡಿಗೆ ಹಾಜರಾಗದೆ ವೈದ್ಯರ ಧರಣಿ

Update: 2021-11-29 13:57 GMT

ಬೆಂಗಳೂರು, ನ.29: ಕೋವಿಡ್ ಅಪಾಯ ಭತ್ತೆಗೆ ತಕ್ಷಣವೇ ಹಣ ಮಂಜೂರು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಹೊರರೋಗಿಗಳ ವಿಭಾಗಕ್ಕೆ(ಒಪಿಡಿ) ಹಾಜರಾಗದೆ ವೈದ್ಯರು ಧರಣಿ ನಡೆಸಿದರು.

ಸೋಮವಾರ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ನೇತೃತ್ವದಲ್ಲಿ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆ ಒಳಗೊಂಡಂತೆ ರಾಜ್ಯಾದ್ಯಂತ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ (ಒಪಿಡಿ) ಹಾಗೂ ಸರಕಾರದಿಂದ ನಿಗದಿಪಡಿಸಲಾಗಿರುವ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ರಾಜ್ಯ ಸರಕಾರವು ರಾಜ್ಯದ ಯುವ ವೈದ್ಯರ ಕಡೆಗೆ ನಿರ್ಲಕ್ಷ್ಯ ತೋರುತ್ತಿದೆ. ಕೋವಿಡ್ ಸಂದರ್ಭದಲ್ಲಿ ಅಧಿಕ ಒತ್ತಡ ಹೇರಿ ನಮ್ಮ ಸೇವೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆದರೆ, ಇದೀಗ ನಿರ್ಲಕ್ಷ್ಯ ತೋರುತ್ತಿದೆ ಎಂದು ಸರಕಾರದ ವಿರುದ್ಧ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖವಾಗಿ ಶೈಕ್ಷಣಿಕ ಶುಲ್ಕ ಪರಿಷ್ಕರಣೆ ಕುರಿತಂತೆ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಸೀಟು ಪಡೆದವರಿಗೆ ಬಹಳ ತಾರತಮ್ಯವಾಗುತ್ತಿದ್ದು, ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೈಕ್ಷಣಿಕ ಶುಲ್ಕವನ್ನು ಪಡೆಯುತ್ತಿದೆ. 

ಹಾಗಾಗಿ ಇಂತಹ ಕೋವಿಡ್ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸಿದ ನಿವಾಸಿ ವೈದ್ಯರುಗಳ ಸೇವೆಯನ್ನು ಪರಿಗಣಿಸಿ ಈ ಮೂಲಕ ಶೈಕ್ಷಣಿಕ ಶುಲ್ಕವನ್ನು 2018ರ ಶೈಕ್ಷಣಿಕ ಸಾಲಿನ ಶುಲ್ಕದಂತೆ ಪುನಾರಚನೆ ಮಾಡುವಂತೆ ಧರಣಿ ನಿರತ ವೈದ್ಯರು ಆಗ್ರಹಿಸಿದರು. 

ಧರಣಿಯನ್ನುದ್ದೇಶಿಸಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಅಧ್ಯಕ್ಷ ಡಾ.ತೇಜು, ಕೋವಿಡ್ ಅಥವಾ ಕೋವಿಡೇತರ ಸೇವೆಗಳು ಎಂದು ನೋಡದೆ ಕಳೆದ ಮೂರು ತಿಂಗಳಿಂದ ನಿರಂತರವಾಗಿ ದುಡಿಯುತ್ತಿರುವ ವೈದ್ಯರಿಗೆ ಕೋವಿಡ್ ಅಪಾಯ ಭತ್ತೆಯನ್ನು ಈ ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಅದೇ ರೀತಿ, 2018-19ನೇ ಶೈಕ್ಷಣಿಕ ಸಾಲಿನ ಶುಲ್ಕವನ್ನು ಪುನಾರಚಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ಮುಂದಾಗಬೇಕು. ಇಲ್ಲದಿದ್ದರೆ, ಒಪಿಡಿ ಮುಷ್ಕರ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಶೀಘ್ರ ರಿಸ್ಕ್ ಭತ್ತೆ ಪಾವತಿ

ಕೋವಿಡ್ ರಿಸ್ಕ್ ಭತ್ತೆ ಪಾವತಿ ವಿಳಂಬ, ವೈದ್ಯರ ಪ್ರತಿಭಟನೆ ಗಮನಕ್ಕೆ ಬಂದಿದೆ. ಈ ಕುರಿತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮೆಡಿಕಲ್ ಕಾಲೇಜುಗಳಿಗೆ ರಿಸ್ಕ್ ಭತ್ತೆಯ ಒಟ್ಟು 73 ಕೋಟಿ ಮೊತ್ತದ ಮಂಜೂರು ಪ್ರಕ್ರಿಯೆಗಳು ಇಂದು ಪೂರ್ಣಗೊಳ್ಳಲಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ರಿಸ್ಕ್ ಭತ್ತೆಯನ್ನು ಎಲ್ಲ ವೈದ್ಯರಿಗೂ ಪಾವತಿಸಲಾಗುವುದು. ಆದ್ದರಿಂದ ಪ್ರತಿಭಟನೆ ಹಿಂಪಡೆದು ಕರ್ತವ್ಯಕ್ಕೆ ಮರಳಬೇಕು ಎಂದು ಕೋರುತ್ತೇನೆ.

-ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News