ಬೆಂಗಳೂರು: ಪೊಲೀಸರ ದೌರ್ಜನ್ಯಕ್ಕೆ ಕೈ ಕಳೆದುಕೊಂಡ ಯುವಕ; ಆರೋಪ

Update: 2021-11-29 14:31 GMT

ಬೆಂಗಳೂರು, ನ.29: ಕಳವು ಆರೋಪದ ಮೇಲೆ ವಿಚಾರಣೆ ಹೆಸರಿನಲ್ಲಿ ಯುವಕನೋರ್ವನನ್ನು ಠಾಣೆಗೆ ಕರೆತಂದ ಪೊಲೀಸ್ ಸಿಬ್ಬಂದಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಕೈಯನ್ನೆ ಕಳೆದುಕೊಂಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ.

ನಗರದ ವೈಟ್‍ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿನ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಈ ಕೃತ್ಯವೆಸಗಿರುವ ಆರೋಪ ಕೇಳಿಬಂದಿದ್ದು, ಪ್ರಮುಖವಾಗಿ ಠಾಣೆಯ ಇನ್ಸ್ ಪೆಕ್ಟರ್ ಸೋಮಶೇಖರ್, ಎಸ್ಸೈ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವಕನ ಪೋಷಕರು ಆಗ್ರಹಿಸಿದ್ದಾರೆ.

ವಾಹನಗಳ ಬ್ಯಾಟರಿ ಕಳವು ಆರೋಪ ಪ್ರಕರಣ ಸಂಬಂಧ 22 ಹರೆಯದ ಸಲ್ಮಾನ್ ಖಾನ್‍ನನ್ನು ಅ.27ರಂದು ವರ್ತೂರು ಠಾಣಾ ಪೊಲೀಸರು ವಶಕ್ಕೆ ಪಡೆದು, ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.

ಆನಂತರ, ಬ್ಯಾಟರಿ ಕಳವು ಪ್ರಕರಣ ಮಾತ್ರವಲ್ಲದೆ, ಇನ್ನಿತರೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಳ್ಳುವಂತೆ ಪಟ್ಟುಹಿಡಿದ ತನಿಖಾಧಿಕಾರಿಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಸಲ್ಮಾನ್ ಖಾನ್ ಆರೋಪಿಸಿದರು.

ಸಲ್ಮಾನ್ ತಾಯಿ ಶಾಬೀನಾ ಮಾತನಾಡಿ, ಸಲ್ಮಾನ್ ದುಡಿಮೆ ಮೇಲೆಯೇ ನಮ್ಮ ಕುಟುಂಬದ ಜೀವನ ನಿಂತಿದೆ. ಹೀಗಿರುವಾಗ, ವಿಚಾರಣೆಗೆಂದು ಕರೆತಂದು, ಕೈಮುರಿದು ಮನೆಗೆ ಕಳುಹಿಸಿದ್ದಾರೆ.ಇಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News