ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದು: ಸಾತಿ ಸುಂದರೇಶ್

Update: 2021-11-29 18:19 GMT

ಬೆಂಗಳೂರು, ನ.29: ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವವಾಗಿದ್ದು, ದೇಶದ ಸಂವಿಧಾನದ ಆಶಯಕ್ಕೆ ತಕ್ಕಂತೆ ಯುವಜನರನ್ನು ಸಂಘಟಿಸಿ ರಾಷ್ಟ್ರ ನಿರ್ಮಾಣಕ್ಕೆ ಯುವಜನರು ಮುಂದಾಗಬೇಕೆಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಕರೆ ನೀಡಿದರು.

ನಗರದ ಮಲ್ಲೇಶ್ವರದಲ್ಲಿರುವ ಘಾಟೆ ಭವನದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಯುವಜನ ಫೆಡರೇಷನ್(ಎಐವೈಎಫ್) ಬೆಂಗಳೂರು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ರಾಷ್ಟ್ರದ ಯುವಜನರು ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿದ್ದು ‘ಎಲ್ಲ ಯುವಕರಿಗೆ ಉದ್ಯೋಗ’ಕ್ಕಾಗಿ ಹೋರಾಟ ನಡೆಸಲು ಸಂಘಟನೆ ಮುಂದಾಗಬೇಕೆಂದು ಕರೆ ನೀಡಿದರು.

ಬೆಂಗಳೂರು ಜಿಲ್ಲಾ ಮಂಡಳಿಯ ನೂತನ ಸಮಿತಿ ರಚನೆ: ಸಮ್ಮೇಳನದಲ್ಲಿ ಎಐವೈಎಫ್ ಬೆಂಗಳೂರು ಜಿಲ್ಲಾ ಮಂಡಳಿಯ ನೂತನ ಸಮಿತಿಯನ್ನು ರಚನೆ ಮಾಡಲಾಯಿತು. ರಾಕೇಶ್ ಹರಿಗೋವಿಂದ್(ಜಿಲ್ಲಾ ಅಧ್ಯಕ್ಷ), ಸುರೇಶ್, ಸರವಣ್ ಹಾಗೂ ಭವ್ಯಾ(ಉಪಾಧ್ಯಕ್ಷರು), ಅಮಿತ್ ಕುಮಾರ್ ವಿ.(ಜಿಲ್ಲಾ ಕಾರ್ಯದರ್ಶಿ), ರಾಜೇಶ್, ಅರುಣ್ ಕುಮಾರ್, ಬಸವ ಕಿರಣ್(ಸಹ ಕಾರ್ಯದರ್ಶಿಗಳು), ವೀರಣ್ಣ(ಕೋಶಾಧಿಕಾರಿ) ಅವರನ್ನು ಆಯ್ಕೆ ಮಾಡಲಾಯಿತು.

ಸಮ್ಮೇಳನದ ತೀರ್ಮಾನಗಳು: ನಿರುದ್ಯೋಗಿ ಯುವಕರಿಗೆ ಮಾಸಿಕ ಹತ್ತು ಸಾವಿರ ರೂ.ನಿರುದ್ಯೋಗ ಭತ್ತೆಗಾಗಿ ಹೋರಾಟ ನಡೆಸುವುದು. ಎಲ್ಲ ನಿರುದ್ಯೋಗಿ ಯುವಕರಿಗೆ ಭಗತ್ ಸಿಂಗ್ ಹೆಸರಿನಲ್ಲಿ ಉದ್ಯೋಗ ಖಾತರಿ ಕಾಯ್ದೆ(ಎಂಪ್ಲಾಯಿಮೆಂಟ್ ಗ್ಯಾರಂಟಿ ಆಕ್ಟ್) ಜಾರಿಗೆತರಲು ಒತ್ತಾಯಿಸುವುದು. ರಾಜ್ಯ ಯುವನೀತಿ ಸಮಿತಿಗೆ ವಿಷಯ ತಜ್ಞರ  ಪಾರದರ್ಶಕ ಆಯ್ಕೆಗೆ ಒತ್ತಾಯಿಸುವುದು ಹಾಗೂ ಬೆಂಗಳೂರು ನಗರದ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವಂತೆ ಹೋರಾಟ ನಡೆಸುವುದು.

ಸಮ್ಮೇಳನದ ಧ್ವಜಾರೋಹಣವನ್ನು ಎಸ್.ಆರ್.ಆರಾಧ್ಯ ನೆರವೇರಿಸಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾ ಅಧ್ಯಕ್ಷ ಹರೀಶ್ ಬಾಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಬಾಬು, ಎ.ಐ.ಟಿ.ಯು.ಸಿ ಜಿಲ್ಲಾ ಕಾರ್ಯದರ್ಶಿ ಸತ್ಯಾನಂದ, ಮಹಿಳಾ ಫೆಡರೇಷನ್ ರಾಜ್ಯ ಅಧ್ಯಕ್ಷೆ ಎ.ಜ್ಯೋತಿ, ಎ.ಐ.ವೈ.ಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ್, ಜಿಲ್ಲಾ ಕಾರ್ಯದರ್ಶಿ ವಿರಣ್ಣ ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News