ಆರೋಗ್ಯ ಸೇವಾ ಕ್ಷೇತ್ರಕ್ಕೆ ಸರ್ಕಾರಿ ವೆಚ್ಚ ಗಣನೀಯ ಹೆಚ್ಚಳ: ಅಂಕಿ ಅಂಶ

Update: 2021-11-30 03:07 GMT

ಹೊಸದಿಲ್ಲಿ: ಆರೋಗ್ಯ ಸೇವಾ ಕ್ಷೇತ್ರಕ್ಕೆ ಸರ್ಕಾರಿ ವೆಚ್ಚ 2017-18ನೇ ವರ್ಷಕೆ ಹೋಲಿಸಿದರೆ ಈ ಬಾರಿ ಶೇಕಡ 40.8ರಷ್ಟು ಅಧಿಕವಾಗಿದೆ. ಜತೆಗೆ ಈ ಬಾರಿಯ ವೆಚ್ಚ ಕಳೆದ ವರ್ಷ ಮಾಡಿದ ವೆಚ್ಚಕ್ಕಿಂತ ಶೇಕಡ 324ರಷ್ಟು ಅಧಿಕ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವಲಯದಲ್ಲಿ ಹೆಚ್ಚಿನ ಹೂಡಿಕೆಯಾಗಿರುವುದು ಸ್ಪಷ್ಟವಾಗುತ್ತದೆ.

ಸರ್ಕಾರ ಮಾಡಿರುವ ವೆಚ್ಚ ಹೆಚ್ಚಿರುವುದು ಹಾಗೂ ಖಾಸಗಿ ಆರೋಗ್ಯ ವಿಮಾ ವೆಚ್ಚದಲ್ಲಿ ಪಾಲು ಹೆಚ್ಚಿರುವುದು ಜನಸಾಮಾನ್ಯರು ಜೇಬಿನಿಂದ ಖರ್ಚು ಮಾಡಬೇಕಾದ ಪ್ರಮಾಣವನ್ನು ಕಡಿಮೆ ಮಾಡಿದೆ. ಆರೋಗ್ಯದ ಮೇಲೆ ಮಾಡುವ ಒಟ್ಟು ವೆಚ್ಚಕ್ಕೆ ಹೋಲಿಸಿದರೆ ಜೇಬಿನಿಂದ ಮಾಡಬೇಕಾದ ವೆಚ್ಚ ಶೇಕಡ 50ಕ್ಕಿಂತ ಕಡಿಮೆಯಾಗಿದೆ ಎನ್ನುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

2017-18ರಲ್ಲಿ ಒಟ್ಟು ಆರೋಗ್ಯ ವೆಚ್ಚದ ಶೇಕಡ 48.8ರಷ್ಟನ್ನು ರೋಗಿಗಳು ಸ್ವಂತವಾಗಿ ಮಾಡಿದ್ದಾರೆ. 2016-17ರಲ್ಲಿ ಈ ಪ್ರಮಾಣ ಶೇಕಡ 58.7 ಹಾಗೂ 2013-14ರಲ್ಲಿ ಶೇಕಡ 64.2ರಷ್ಟಿತ್ತು. ಅಂದರೆ ಕಳೆದ ಐದು ವರ್ಷದಲ್ಲಿ ಓಓಪಿಇ ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ. ಆದಾಗ್ಯೂ ಇದು ಜಾಗತಿಕ ಸರಾಸರಿ (ಶೇಕಡ 18)ಗೆ ಹೋಲಿಸಿದರೆ ಅತ್ಯಧಿಕ. ದಿಢೀರ್ ಆರೋಗ್ಯ ತುರ್ತು ಸ್ಥಿತಿಗಳು ಬಡ ಕುಟುಂಬಗಳನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತವೆ.

ರಾಷ್ಟ್ರೀಯ ಆರೋಗ್ಯ ಲೆಕ್ಕಾಚಾರ (ಎನ್‌ಎಚ್‌ಎ) ಅಂದಾಜಿನ ಪ್ರಕಾರಮ ಆರೋಗ್ಯ ಕ್ಷೇತ್ರದ ಮೇಲೆ ಸರ್ಕಾರಿ ವೆಚ್ಚ ದೇಶದ ಜಿಡಿಪಿಯ ಶೇಕಡ 1.3 ಆಗಿದೆ. ಇದು ಹಿಂದಿನ ವರ್ಷ ಶೇಕಡ 1.2ರಷ್ಟಿದ್ದರೆ 2013-14ರಲ್ಲಿ ಶೇಕಡ 1.15 ಆಗಿತ್ತು. ಆದಾಗ್ಯೂ ರಾಷ್ಟ್ರೀಯ ಆರೋಗ್ಯ ನೀತಿ-2017ರಲ್ಲಿ ಗುರಿ ಹಾಕಿಕೊಳ್ಳಲಾದ ಶೇಕಡ 2.5ಕ್ಕಿಂತ ಇದು ಕಡಿಮೆ.

ವಿಮಾ ಯೋಜನೆಗಳು, ಸರ್ಕಾರಿ ನೆರವಿನ ಆರೋಗ್ಯ ವಿಮಾ ಯೋಜನೆಗಳು ಮತ್ತು ಸರ್ಕಾರಿ ನೌಕರರಿಗೆ ಮಾಡುವ ವೈದ್ಯಕೀಯ ವೆಚ್ಚದ ಮರುಪಾವತಿ ಸೇರಿದಂತೆ ಆರೋಗ್ಯಕ್ಕಾಗಿ ಸಾಮಾಜಿಕ ಭದ್ರತೆ ವೆಚ್ಚ 2017-18ರಲ್ಲಿ ಶೇಕಡ 9ಕ್ಕೆ ಹೆಚ್ಚಿದೆ. ಇದು 2016-17ರಲ್ಲಿ ಶೇಕಡ 7.3 ಹಾಗೂ 2013-14ರಲ್ಲಿ ಶೇಕಡ 6ರಷ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News