ಬೆಂಗಳೂರು: ರಸ್ತೆ ಗುಂಡಿಗಳಿಗೆ ಹೂವಿನ ಹಾರ ಹಾಕಿ ಪೂಜೆ; ವೀಡಿಯೊ ವೈರಲ್

Update: 2021-11-30 18:17 GMT

ಬೆಂಗಳೂರು, ನ.30: ಕಳೆದ ಎರಡು ವರ್ಷಗಳಿಂದ ಪಾಲಿಕೆಯು ಗುಣಮಟ್ಟದ ರಸ್ತೆಕಾಮಗಾರಿಗಳನ್ನು ಮಾಡುತ್ತಿಲ್ಲ. ಇದರಿಂದ ನಗರದಲ್ಲಿರುವ ಬಹುಭಾಗ ರಸ್ತೆಗಳಲ್ಲಿ ಗುಂಡಿಗಳು ಸರ್ವೇಸಾಮಾನ್ಯವಾಗಿದೆ. ನಗರದಲ್ಲಿ ರಸ್ತೆಗುಂಡಿ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರಕಾರ ಮತ್ತು ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿದೆ. ಇದನ್ನು ಖಂಡಿಸಿ, ಮಂಗಳವಾರದಂದು ಭಾರತಿನಗರ ರೆಸಿಡೆಂಟ್ಸ್ ಫೋರಮ್ ಎಂಬ ನಾಗರಿಕ ಸಂಘಟನೆಯು ಕಾಂಪ್‍ಬೆಲ್ ರಸ್ತೆಯ ಗುಂಡಿಯೊಂದಕ್ಕೆ ಗಣಹೋಮ ಮಾಡಿ, ಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಿದೆ.

ನಗರದಲ್ಲಿ ಒಂದೇ ಒಂದು ರಸ್ತೆಯು ಗುಂಡಿಗಳಿಂದ ಮುಕ್ತವಾಗಿಲ್ಲ. ಬಿಬಿಎಂಪಿ ಗಾಢ ನಿದ್ದೆಯಲ್ಲಿರುವಂತಿದೆ. ಈಗಾಗಲೇ, ರಸ್ತೆಗುಂಡಿಗಳು ಅನೇಕ ಜೀವಗಳನ್ನು ಬಲಿ ಪಡೆದಿವೆ. ಆದರೆ ಸರಕಾರ ರಸ್ತೆಗುಂಡಿಗಳನ್ನು ಮುಚ್ಚುತ್ತಿಲ್ಲ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಲು ಗುಂಡಿಯಲ್ಲಿ ಹೋಮ ಮಾಡಿದ್ದೇವೆ ಎಂದು ಭಾರತಿನಗರ ರೆಸಿಡೆಂಟ್ಸ್ ಫೋರಮ್ ತಿಳಿಸಿದೆ.

ಭಾರತಿನಗರ ರೆಸಿಡೆಂಟ್ಸ್ ಫೋರಮ್ ಪ್ರಧಾನ ಕಾರ್ಯದರ್ಶಿ ಎನ್.ಎಸ್ ರವಿ ಮಾತನಾಡಿ, ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚದಿರುವುದರಿಂದ ಬೈಕ್ ಸವಾರರು ರಸ್ತೆಯಲ್ಲಿ ಬೀಳುತ್ತಿದ್ದಾರೆ. ವಾಹನ ಸವಾರರು ಪ್ರತಿದಿನ ಜೀವ ಕಳೆದುಕೊಳ್ಳುವ ಪರಿಸ್ಥತಿ ನಿರ್ಮಾಣವಾಗಿದೆ. ಹೀಗಾಗಿ ಸರಕಾರವು ರಸ್ತೆಗುಂಡಿಗಳನ್ನು ಮುಚ್ಚುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು.

ಪ್ರತಿಭಟನಾಕಾರರು ಕಾಂಪ್‍ಬೆಲ್ ರಸ್ತೆ ಗುಂಡಿಗೆ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗಣಹೋಮ ಸಲ್ಲಿಸಿದರು. ನೀರಿನಿಂದ ತುಂಬಿದ್ದ ಕಾಂಪ್‍ಬೆಲ್ ರಸ್ತೆಯ ಗುಂಡಿಗೆ ಹೂವು ಹಾಕಿ ಗಣಹೋಮ ಮಾಡಿದರು. ಪುರೋಹಿತರು ರಸ್ತೆಯಲ್ಲಿ ಕುಳಿತು ವೇದ ಮಂತ್ರ ಪಠಿಸಿ ಪೂಜೆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News