ಸರಕಾರವು ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿದೆ: ಸ್ಟ್ಯಾನಿ ಪಿಂಟೋ ಆರೋಪ

Update: 2021-11-30 16:01 GMT

ಬೆಂಗಳೂರು, ನ.30: ಸರಕಾರವು ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿ ದೌರ್ಜನ್ಯ ಎಸಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ನಗರದ ಪುರಾತನ ಆಲ್‍ಸೈಂಟ್ ಚರ್ಚ್ ಸ್ಥಳವನ್ನು ಮೆಟ್ರೋ ಅತಿಕ್ರಮ ಮಾಡಿದೆ ಎಂದು ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷ ಸ್ಟ್ಯಾನಿ ಪಿಂಟೋ ಆರೋಪಿಸಿದ್ದಾರೆ. 

ಮಂಗಳವಾರ ಚರ್ಚ್ ಮುಂಭಾಗದ ರಸ್ತೆಯ ಬದಿಯಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಸುಮಾರು ನೂರೈವತ್ತು ವರ್ಷಗಳ ಇತಿಹಾಸವನ್ನು ಹೊಂದಿರುವ ಆಲ್ ಸೈಂಟ್ ಚರ್ಚ್ ಕೇವಲ ಧಾರ್ಮಿಕ ಕೇಂದ್ರ ಮಾತ್ರವಲ್ಲ ಅದೊಂದು ಐತಿಹಾಸಿಕ ಸ್ಥಳವಾಗಿದೆ. ಐತಿಹಾಸಿಕ ಸ್ಥಳಗಳನ್ನು ರಕ್ಷಿಸುವುದು ಸರಕಾರದ ಕರ್ತವ್ಯವಾಗಿದೆ. ಇದನ್ನು ಸಂವಿಧಾನವು ತಿಳಿಸುತ್ತದೆ. ಆದರೆ ಮೆಟ್ರೋ ಕಾಮಗಾರಿಯ ನೆಪವೊಡ್ಡಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಸರಕಾರವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದರು. 

ಮೆಟ್ರೋ ಎರಡನೇ ಹಂತದಲ್ಲಿ ನಾಗವಾರ-ಗೊಟ್ಟಿಗೆರೆ ಮಾರ್ಗವಾಗಿ ನಡೆಯುತ್ತಿರುವ ಕಾಮಗಾರಿಗಾಗಿ ಈಗಾಗಲೇ ಚರ್ಚ್‍ಗೆ ಸೇರಿದ 48 ಸಾವಿರ ಅಡಿಗಳಷ್ಟು ವಾಣಿಜ್ಯ ಸ್ಥಳವನ್ನು ಮೆಟ್ರೋಗೆ ಬಿಟ್ಟುಕೊಡಲಾಗಿದೆ. ಆದರೆ ಈ 9000 ಅಡಿಗಳನ್ನು ಏಕಾಏಕಿ ಯಾವುದೇ ಮಾಹಿತಿ ಇಲ್ಲದೇ ಅತಿಕ್ರಮಣ ಮಾಡಿರುವುದು ಸರಿಯಲ್ಲ. ಮೆಟ್ರೋನ ಈ ನಡೆಯಿಂದಾಗಿ ಚರ್ಚ್ ಬಳಿಯ ಬೃಹತ್ ಮರಗಳು ಧರೆಗೆ ಉರುಳಲಿವೆ ಎಂದ ಅವರು, ಚರ್ಚ್ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿ, ಸರಕಾರದ ಕ್ರಮದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News