​ಈ ರಾಜ್ಯದಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ಉಚಿತ ಕೋವಿಡ್ ಚಿಕಿತ್ಸೆ ಇಲ್ಲ

Update: 2021-12-01 01:32 GMT
ಪಿಣರಾಯಿ ವಿಜಯನ್ (Photo - PTI)

ತಿರುವನಂತಪುರ : ಕೋವಿಡ್-19 ವಿರುದ್ಧದ ಲಸಿಕೆ ತೆಗೆದುಕೊಳ್ಳದಿರುವವರ ವಿರುದ್ಧ ಕಠಿಣ ನಿಲುವು ಕೈಗೊಳ್ಳಲು ಕೇರಳ ಸರ್ಕಾರ ನಿರ್ಧರಿಸಿದ್ದು, ಲಸಿಕೆ ಪಡೆಯದವರಿಗೆ ಕೋವಿಡ್-19 ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಉಚಿತ ಚಿಕಿತ್ಸೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಲಸಿಕೆ ಪಡೆಯದವರಿಗೆ ಸೋಂಕು ತಗುಲಿದಾಗ, ಅವರ ಚಿಕಿತ್ಸೆಗೆ ಸರ್ಕಾರ ಹಣ ಪಾವತಿಸುವುದಿಲ್ಲ ಎಂದು ಅಧಿಕೃತ ಪ್ರಕಟಣೆ ಹೇಳಿದೆ. ಆರೋಗ್ಯ ಸಮಸ್ಯೆಗಳಿಂದಾಗಿ ಲಸಿಕೆ ಪಡೆಯಲಾಗದವರು ಕೋವಿಡ್‌ಗೆ ತುತ್ತಾದ ಸಂದರ್ಭದಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ಪಡೆಯಲು ಸರ್ಕಾರಿ ವೈದ್ಯರಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.

ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮತ್ತು ಶಿಕ್ಷಕರು ಕೂಡಾ ಅಸ್ವಸ್ಥತೆ ಅಥವಾ ಅಲರ್ಜಿಗಳ ಕಾರಣದಿಂದ ಲಸಿಕೆ ಪಡೆಯಲು ಸಾಧ್ಯವಾಗದಿದ್ದರೆ, ಕರ್ತವ್ಯಕ್ಕೆ ಮರಳಲು ಸರ್ಕಾರಿ ವೈದ್ಯರಿಂದ ಪ್ರಮಾಣಪತ್ರ ಪಡೆದು ಸಲ್ಲಿಸಬೇಕಾಗುತ್ತದೆ. ಜತೆಗೆ ಸಂಸ್ಥೆಗೆ ಹಾಜರಾಗಬೇಕಿದ್ದರೆ, ಪ್ರತಿ ವಾರ ನೆಗೆಟಿವ್ ಆರ್‌ಟಿ-ಪಿಸಿಆರ್ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಈ ನಿರ್ದೇಶನಗಳು ಸರ್ಕಾರಿ ನೌಕರರಿಗೂ ಅನ್ವಯವಾಗುತ್ತದೆ.

ಲಸಿಕೆ ಪಡೆಯದ ಸುಮಾರು 5,000 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಶಾಲಾ- ಕಾಲೇಜುಗಳಿಗೆ ಹಾಜರಾಗುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News