ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ: ವಾಸ್ತವಕ್ಕೆ ಮುಖಾಮುಖಿ

Update: 2021-12-01 05:41 GMT

ಡಾ. ಮುಜಾಫರ್ ಅಸಾದಿ ಅವರ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಕೃತಿ ಭಾರತೀಯ ಮುಸ್ಲಿಮರ ಕುರಿತಂತೆ ಕೆಲವರಲ್ಲಿರುವ ಜಡ್ಜ್‌ಮೆಂಟಲ್ ಮನಸ್ಥಿತಿಯನ್ನು ಮುಖಕ್ಕೆ ಒಡೆದಂತೆ ಪ್ರಶ್ನಿಸುತ್ತದೆ. ಮುಸ್ಲಿಮರ ಕುರಿತಂತೆ ಮುಸ್ಲಿಮರಿಗೆ ಅರಿವಿಲ್ಲದ ಹಲವು ವಾಸ್ತವಗಳನ್ನು ಈ ಕೃತಿ ತೆರೆದಿಡುತ್ತದೆ. ‘ಅಲ್ಪಸಂಖ್ಯಾತರ ತುಷ್ಟೀಕರಣ’ ಎನ್ನುವ ಹುಸಿಯ ನಡುವೆ ಮುಸ್ಲಿಮ್ ಸಮುದಾಯ ಹೇಗೆ ಇನ್ನೂ ತನಗೇ ತಿಳಿಯದಂತೆ ಜಾತಿ ವ್ಯವಸ್ಥೆಯ ಒಳಸುಳಿಗೆ ಸಿಲುಕಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ ಎನ್ನುವ ಅಂಶವನ್ನು ಕೃತಿ ಬಹಿರಂಗಪಡಿಸುತ್ತದೆ.

‘‘ಈ ಕೃತಿಯು ಅಲ್ಪಸಂಖ್ಯಾತರ ಒಳ ಪ್ರಭೇದಗಳ ಕುರಿತಾದ ಚರ್ಚೆಯನ್ನು ತನ್ನ ಕೇಂದ್ರದಲ್ಲಿ ಇರಿಸಿಕೊಂಡರೂ ಅಲ್ಲಿಯೇ ನಿಲ್ಲದೆ, ಅದಕ್ಕೆ ಅಂಟಿಕೊಂಡ ಇತರ ಅನೇಕ ವಿಷಯಗಳನ್ನು ಮೊದಲ ಬಾರಿಗೆ ಓದುಗರ ಮುಂದಿಡುತ್ತಿದೆ. ಅದು ನಮ್ಮ ನಡುವೆ ಬಹುಕಾಲದಿಂದ ಪ್ರಚಲಿತದಲ್ಲಿರುವ ಅನೇಕ ಮಿಥ್ಯೆಗಳನ್ನು ಒಡೆಯುತ್ತದೆ. ವಸಾಹತು ಕಾಲಘಟ್ಟದಲ್ಲಿ ಪ್ರಭುತ್ವವು ಕಟ್ಟಿಕೊಟ್ಟ ಚರಿತ್ರೆ ಮತ್ತು ವಾಸ್ತವಗಳನ್ನು ಪ್ರಸ್ತುತ ಪುಸ್ತಕವು ದಿಟ್ಟವಾಗಿ ಆಧಾರ ಸಮೇತ ಪರೀಕ್ಷಿಸುತ್ತದೆ. ಧರ್ಮ, ಜಾತಿ, ಜನಗಣತಿ, ಮೀಸಲಾತಿ, ರಾಜಕಾರಣ, ಸಂಶೋಧನೆ ಮತ್ತು ಕೆಲವು ದಾಖಲೆಗಳು ಹೇಗೆ ನಮ್ಮ ವರ್ತಮಾನವನ್ನು ಹಾಳುಗೆಡವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವವರು ಅಸಾದಿಯವರ ಈ ಪುಸ್ತಕವನ್ನು ಧ್ಯಾನಿಸಿ ಓದಬೇಕು. ಇದರಲ್ಲಿ ಅನೇಕ ವಿಷಯಗಳನ್ನು ಆಧರಿಸಿಕೊಂಡು ನಮ್ಮ ಸಂಶೋಧನೆಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಸಾಧ್ಯವಿದೆ’ ಇದು ಕೃತಿಯ ಕುರಿತಂತೆ ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆಯವರ ಅನಿಸಿಕೆ.

ಈ ಕೃತಿಯು ಭಾರತದಲ್ಲಿರುವ ಸುಮಾರು 20 ಕೋಟಿ ಮುಸಲ್ಮಾನರನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾಗಿರುವ ಒಂದು ಚೌಕಟ್ಟನ್ನು ಒದಗಿಸಿಕೊಡುತ್ತದೆ. ಮುಖ್ಯವಾಗಿ ರಾಜಕೀಯವಾಗಿ ಪ್ರಜ್ಞಾವಂತರಾಗಬೇಕಾದರೆ, ಜಾಗೃತರಾಗಬೇಕಾದರೆ ಮೇಲ್‌ಸ್ತರದಲ್ಲಿರುವ ಮುಸ್ಲಿಮರು ಮೊದಲು ತಮ್ಮಿಳಗಿರುವ ವಾಸ್ತವವನ್ನು ಗುರುತಿಸಿಕೊಂಡು ಅದನ್ನು ಒಪ್ಪಿಕೊಳ್ಳಬೇಕಾಗಿದೆ. ಆದುದರಿಂದ ಮುಸ್ಲಿಮರ ಕುರಿತಂತೆ ಅರಿವಿಲ್ಲ ಇತರರಿಗೆ ಮಾತ್ರವಲ್ಲ, ಸಾಮಾಜಿಕ ಮತ್ತು ರಾಜಕೀಯವಾಗಿ ಜಾಗೃತರಾಗಬೇಕಾದ ಮುಸ್ಲಿಮರಿಗೂ ಈ ಕೃತಿ ಮಾರ್ಗದರ್ಶನವಾಗಿದೆ.

‘‘ಇದೊಂದು ಸಂಶೋಧನಾ ಗ್ರಂಥವೆಂದು ಹೇಳಿಕೊಳ್ಳುವುದರಲ್ಲಿ ನನಗೆ ಸಂಕೋಚವಿಲ್ಲ. ಈ ಸಂಶೋಧನೆಯ ಹಿಂದೆ ಬಾಲ್ಯದ ನೆನಪುಗಳಿವೆ. ವೈಯಕ್ತಿಕವಾಗಿ ಮತ್ತು ಸಮಷ್ಟಿಯಾಗಿ ಎದುರಿಸಿದ ಸಮಸ್ಯೆಗಳಿವೆ. ಇತಿಹಾಸದ ಭಾರವಿದೆ. ಅದಕ್ಕಾಗಿಯೇ ಪ್ರತಿ ವಾದಕ್ಕೆ, ಕಥನಕ್ಕೆ ಐತಿಹಾಸಿಕ ಪುರಾವೆಗಳನ್ನು ನೀಡಲು ಯತ್ನಿಸಿದ್ದೇನೆ. ವಿವಿಧ ಬೌದ್ಧಿಕ ಚರ್ಚೆಗಳನ್ನು ಮುಂದಿಟ್ಟು ವಾದಿಸಿದ್ದೇನೆ. ಆದರೂ ಸಾಕಷ್ಟು ವಿಷಯಗಳು ಮತ್ತು ಜಾತಿಗಳು ಈ ಅಧ್ಯಯನದಿಂದ ಹೊರಗಿವೆ. ಆದ ಕಾರಣ ಇದನ್ನು ಪರಿಪೂರ್ಣವಾದ ಸಂಶೋಧನಾ ಗ್ರಂಥವೆಂದು ಕರೆಯಲು ನಾನು ಬಯುಸುವುದಿಲ್ಲ’’ ಇದು ಕೃತಿಯ ಲೇಖಕ ಅಸಾದಿಯವರ ಮಾತು. ಬಹುರೂಪಿ, ಬೆಂಗಳೂರು ಹೊರತಂದಿರುವ ಈ ಕೃತಿಗಾಗಿ ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News