ಬೆಂಗಳೂರು: ರಸ್ತೆ ಗುಂಡಿ ಪ್ರಕರಣ; ಬಿಬಿಎಂಪಿ ಇಂಜಿನಿಯರ್ ಬಂಧನ

Update: 2021-12-01 16:10 GMT

ಬೆಂಗಳೂರು, ಡಿ.1: ರಸ್ತೆ ನಡುವಿನ ಗುಂಡಿಯಿಂದ ಅಪಘಾತವಾಗಿ ಯುವಕನೊಬ್ಬ ಮೃತಪಟ್ಟ ಆರೋಪ ಪ್ರಕರಣ ದಾಖಲಿಸಿರುವ ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು, ಬಿಬಿಎಂಪಿ ಇಂಜಿನಿಯರ್ ಒಬ್ಬರನ್ನು ಆರೋಪಿ ಎಂದು ಪರಿಗಣಿಸಿ ಬಂಧಿಸಿ, ಬಿಡುಗಡೆಗೊಳಿಸಿದ್ದಾರೆ.

ನ.27ರಂದು ಅಝೀಂ ಅಹ್ಮದ್ ಎಂಬಾತ ಯುವಕ ಸ್ಕೂಟರ್ ನಲ್ಲಿ ಥಣಿಸಂದ್ರದಿಂದ ಹೆಗಡೆನಗರಕ್ಕೆ ಪ್ರಯಾಣಿಸುತ್ತಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಪ್ರಕಾಶ್ ಹಾರ್ಡ್‍ವೇರ್ ಮುಂಭಾಗ ರಸ್ತೆಯ ಎಡಭಾಗದಲ್ಲಿ ಬಿದ್ದಿದ್ದ ಗುಂಡಿಯನ್ನು ಗಮಿನಿಸದೆ, ವಾಹನ ಅದಕ್ಕೆ ಇಳಿದು ಆಯತಪ್ಪಿ ಅಝೀಂ ಸ್ಕೂಟರ್ ಸಮೇತ ಕೆಳಗೆ ಬಿದ್ದಿದ್ದಾರೆ.

ಅದೇ ಸಮಯಕ್ಕೆ ವೇಗವಾಗಿ ಬಂದ ಸರಕು ಸಾಗಾಣಿಕೆ ವಾಹನ ಆತನ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದ. 
ಈ ಕುರಿತು ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ 279, 336, 283, 304 (ಎ) ಹಾಗೂ ಎಎಂವಿ ಕಾಯ್ದೆ 134 (ಎ ಮತ್ತು ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ.

ರಸ್ತೆ ಕಾಮಗಾರಿ ಉಸ್ತುವಾರಿ ಹೊಂದಿದ್ದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಬಂಧಿಸಿ ಠಾಣೆಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News