5.59 ಕೆಜಿ ಚಿನ್ನದ ಗಟ್ಟಿ ದೋಚಿದ್ದ ಪ್ರಕರಣ: ಅಟಿಕಾ ಗೋಲ್ಡ್ ಸಿಬ್ಬಂದಿ ಸೇರಿ ಹಲವರು ಬಲೆಗೆ

Update: 2021-12-01 17:01 GMT

ಬೆಂಗಳೂರು, ಡಿ.1: 2.56 ಕೋಟಿ ಮೌಲ್ಯದ 5.59 ಕೆ.ಜಿ ಚಿನ್ನದ ಗಟ್ಟಿಗಳನ್ನು ಸಂಚು ರೂಪಿಸಿ ದೋಚಿದ್ದ ಆರೋಪ ಪ್ರಕರಣ ಸಂಬಂಧ ಅಟಿಕಾ ಗೋಲ್ಡ್ ಭದ್ರತಾ ಸಿಬ್ಬಂದಿ ಏಳು ಜನರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಗರದ ನಿವಾಸಿಗಳಾದ ಅಮ್ಜದ್(34), ಉಮೇಶ್(54) ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದರು.

ಬಂಧಿತ ಆರೋಪಿಗಳ ಪೈಕಿ ಓರ್ವ ಅಟಿಕಾ ಗೋಲ್ಡ್ ಕಂಪೆನಿಯ ಸಿಬ್ಬಂದಿ ಆಗಿದ್ದು, ಈತ ಆಗಿಂದಾಗ್ಗೆ ಬರುವ ಗ್ರಾಹಕರ ಬಗ್ಗೆ ನಿಗಾ ವಹಿಸಿ ಬಂಧಿತ ಮತ್ತೊಬ್ಬ ಆರೋಪಿಯೊಂದಿಗೆ ಮಾಹಿತಿ ಹಂಚಿಕೊಂಡು ನಂತರ 7 ಮಂದಿಯ ಗುಂಪು ಕಟ್ಟಿಕೊಂಡು ಕೃತ್ಯ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು. 

ಸಂಸ್ಕಾರ್ ಎಂಟರ್ ಪ್ರೈಸನ್ ಎಂಬ ಹೆಸರಿನ ಬುಲಿಯನ್ ವ್ಯವಹಾರ ನಡೆಸುತ್ತಿದ್ದ ಸಿದ್ದೇಶ್ವರ ಸಿಂಗ್ ಅವರು ತಮ್ಮ ಕೆಲಸಗಾರನ ಜೊತೆ ನ.19ರಂದು ಇಂಡಿಯನ್ ಎಕ್ಸ್‍ಪ್ರೆಸ್ ಬಳಿಯ ಅಟಿಕಾ ಗೋಲ್ಡ್ ಮಳಿಗೆಯಿಂದ 2 ಕೋಟಿ 25 ಲಕ್ಷ ಮೌಲ್ಯದ 5,593 ಕೆ.ಜಿ ಚಿನ್ನದ ಗಟ್ಟಿಗಳನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. 

ಮಾರ್ಗ ಮಧ್ಯದಲ್ಲಿ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ರಾಜ್ ಹೊಟೇಲ್ ಬಳಿ ಇರುವ 22 ನೇ ಕ್ರಾಸ್‍ಗೆ ಬಂದಾಗ ಬಂಧಿತರಲ್ಲಿ ಇಬ್ಬರು ಬೈಕ್‍ನಲ್ಲಿ ಬಂದು ಅಡ್ಡ ಹಾಕಿ ಮಾರಕಾಸ್ತ್ರಗಳಿಂದ ಬೆದರಿಸಿ 2 ಕೋಟಿ 56 ಲಕ್ಷ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕಸಿದು ಪರಾರಿಯಾಗಿದ್ದರು. 
ಈ ಸಂಬಂಧ ಸಿದ್ದೇಶ್ವರ ಸಿಂಗ್ ಅವರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ಕೇಂದ್ರ ವಿಭಾಗದ ಹಲಸೂರು ಗೇಟ್ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಬಂಧಿತರಿಂದ 2.25 ಕೋಟಿ ರೂ.ಬೆಲೆ ಬಾಳು 4,984 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖಾ ತಂಡಕ್ಕೆ 70 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News