ತಾನು ಹುಟ್ಟಿದ್ದೇ ತಪ್ಪು ಎಂದು ತಾಯಿಯ ವೈದ್ಯರ ಮೇಲೆ ಕೇಸು ಜಡಿದ ಮಹಿಳೆ !

Update: 2021-12-02 06:36 GMT
ಎವೀ ಟೂಂಬೆಸ್ (Photo: instagram/evie.toombes)

ಲಂಡನ್: ತಾನು ಹುಟ್ಟಲೇಬಾರದಾಗಿತ್ತು ಎಂದು ಹೇಳಿಕೊಂಡು ತನ್ನ ತಾಯಿಯ ವೈದ್ಯರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಯುವತಿಯೊಬ್ಬಳಿಗೆ  ದೊಡ್ಡ ಮೊತ್ತದ ಪರಿಹಾರ ಮೊತ್ತ ಲಭಿಸಿದೆ. ಇಂಗ್ಲೆಂಡ್‌ನ ಸ್ಟಾರ್ ಶೋಜಂಪರ್ ಆಗಿರುವ ಎವೀ ಟೂಂಬೆಸ್ ಎಂಬ ಯುವತಿ ತಾನು 'ಸ್ಪೈನಾ ಬಿಫಿಡಾ' ಎಂಬ ಸಮಸ್ಯೆಯೊಂದಿಗೆ ಹುಟ್ಟಿದ್ದರಿಂದ ತನ್ನನ್ನು ತಪ್ಪಾಗಿ ಹುಟ್ಟಿಸಲಾಗಿದೆ ಎಂದು ಹೇಳಿಕೊಂಡು ವೈದ್ಯರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಳು. ಆಕೆಯ ಬೆನ್ನು ಹುರಿಯ ಸಮಸ್ಯೆಯಿಂದಾಗಿ ಆಕೆ ಕೆಲವು ಬಾರಿ ದಿನದ 24 ಗಂಟೆಯೂ ಟ್ಯೂಬ್‌ಗಳನ್ನು ಸಿಕ್ಕಿಸಿಕೊಂಡೇ ಇರಬೇಕಾಗುತ್ತದೆ ಎನ್ನಲಾಗಿದೆ.

ಈ 20 ವರ್ಷದ ಯುವತಿ ತಾಯಿಯ ವೈದ್ಯೆ ಫಿಲಿಪ್ ಮಿಚೆಲ್ ಅವರು ಆಕೆಗೆ ಗರ್ಭವತಿಯಾಗಿದ್ದಾಗ ಸೂಕ್ತ ಸಲಹೆ ನೀಡಿರಲಿಲ್ಲ. ತನ್ನ ತಾಯಿಗೆ ಫೋಲಿಕ್ ಆಸಿಡ್ ಮಾತ್ರೆಗಳನ್ನು ತೆಗೆದುಕೊಂಡು ಹುಟ್ಟುವ ಮಗು ಈ ಸಮಸ್ಯೆಗೊಳಗಾಗದಂತೆ ತಡೆಯಬಹುದೆಂದು ಹೇಳಿದ್ದರೆ, ತಾಯಿ ಗರ್ಭ ಧರಿಸುವ ಬಗ್ಗೆ ನಿರ್ಧರಿಸುತ್ತಿರಲಿಲ್ಲ ಎಂದು ಎವೀ ವಾದಿಸಿದ್ದಳು.

ಆಕೆಯ ತಾಯಿ ಕೂಡ ನ್ಯಾಯಾಲಯದ ಮುಂದೆ ಹಾಜರಾಗಿ ಮಗಳು ಹೇಳಿದ್ದನ್ನೇ ಹೇಳಿದ್ದಾರಲ್ಲದೆ ಈ ಹಿಂದೆ ಉತ್ತಮ ಆಹಾರ ತೆಗೆದುಕೊಂಡಿದ್ದರೆ ಫೋಲಿಕ್ ಆಸಿಡ್ ಸಪ್ಲಿಮೆಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಲಾಗಿತ್ತು ಎಂದಿದ್ದಾರೆ.

ಬುಧವಾರ ಈ ಪ್ರಕರಣದ ಕುರಿತು ಲಂಡನ್ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ಎವೀ ತಾಯಿಗೆ ಸೂಕ್ತ ಸಲಹೆಗಳನ್ನು ನೀಡಿದ್ದರೆ ಆಕೆ ಗರ್ಭ ಧರಿಸುವುದನ್ನು ಮುಂದೂಡುತ್ತಿದ್ದರು ಹಾಗೂ ಮುಂದೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದಾಗಿತ್ತು ಎಂದು ಹೇಳಿ ಎವೀಗೆ ದೊಡ್ಡ ಮೊತ್ತದ ಪರಿಹಾರ ನೀಡಬೇಕೆಂದು ತಿಳಿಸಿದೆ. ಆದರೆ ಈ  ಮೊತ್ತದ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಆದರೆ ಜೀವನಪರ್ಯಂತ ಆಕೆಗೆ ಅಗತ್ಯವಿರುವ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಮೊತ್ತವನ್ನು ನಿಗದಿಪಡಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News